ರಾಜ್ಯಕ್ಕೆ ಅಕ್ಕಿ ನೀಡದಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ, ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ: ಡಿಕೆ ಶಿವಕುಮಾರ್

”ರಾಜ್ಯಕ್ಕೆ ಅಕ್ಕಿ ನೀಡದೇ ಇರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಎಲ್ಲವನ್ನು ಬಹಿರಂಗಪಡಿಸುತ್ತೇನೆ. ಕೇಂದ್ರ ಸರ್ಕಾರ ಊಹೆಗೂ ಮೀರಿ ರಾಜ್ಯದ ವಿರುದ್ಧ ಧೋರಣೆ ತಾಳುತ್ತಿದೆ. ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ ನಿಮ್ಮ ಮುಂದೆ ಬಹಿರಂಗಪಡಿಸುತ್ತೇನೆ” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ”ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡಲು, ಬಡವರಿಗೆ ಅಕ್ಕಿ ನೀಡದಿರಲು ಕೇಂದ್ರ ಸರಕಾರವು ತೀರ್ಮಾನಿಸಿದೆ. ಪುಕ್ಕಟೆಯಾಗಿ ಅಕ್ಕಿ ನೀಡಿ ಎಂದು ನಾವು ಅವರಿಗೆ ಕೇಳಿರಲಿಲ್ಲ. ಭಾರತೀಯ ಆಹಾರ ಪ್ರಾಧಿಕಾರ ದೇಶದಲ್ಲಿ ರೈತರಿಂದ ದವಸ ಧಾನ್ಯಗಳನ್ನು ಖರೀದಿ ಮಾಡಿ ದಾಸ್ತಾನು ಮಾಡುವ ವ್ಯವಸ್ಥೆ ಇದೆ” ಎಂದರು.

”ಸದ್ಯ ದಾಸ್ತಾನಿನಲ್ಲಿ ಅಕ್ಕಿ ಇದೆ. ಆರಂಭದಲ್ಲಿ ಅಕ್ಕಿ ನೀಡಲು ಒಪ್ಪಿದವರು, ನಂತರ ಅದನ್ನು ನಿರಾಕರಿಸಿದ್ದಾರೆ. ಹೀಗಾಗಿ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದಿಂದ ನಾಳೆ ಪ್ರತಿಭಟನೆ ಮಾಡಲಾಗುತ್ತಿದೆ. ಪಕ್ಷದ ಎಲ್ಲಾ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ನಾನು ಸಹ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ” ಎಂದು ತಿಳಿಸಿದರು.

ಅಶೋಕ್ ತಮ್ಮ ತಟ್ಟೆಯಲ್ಲಿರುವ ಹೆಗ್ಗಣ ತೆಗೆಯಲಿ:

ಆರ್ ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ”ಅಶೋಕ್ ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆದುಹಾಕಲಿ. ಅವರ ಪಕ್ಷದಲ್ಲಿನ ನಾಯಕರ ಹೇಳಿಕೆ ಕುರಿತು ಗೊಂದಲ ಬಗೆಹರಿಸಿಕೊಳ್ಳಲಿ. ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ. ನಂತರ ನಮ್ಮ ಪಕ್ಷ, ಮುಖ್ಯಮಂತ್ರಿ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲಿ” ಎಂದರು.

”ಜನ ನಮಗೆ 5 ವರ್ಷಗಳ ಕಾಲ ಅಧಿಕಾರ ನೀಡಿದ್ದು, ಅವರ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಗುರಿ” ಎಂದು ತಿಳಿಸಿದರು.

ಸುರೇಶ್ ಅವರ ಹೇಳಿಕೆ ವೈರಾಗ್ಯದ್ದಲ್ಲ:

ಡಿ.ಕೆ. ಸುರೇಶ್ ಅವರು ರಾಜಕೀಯ ವೈರಾಗ್ಯದ ಕುರಿತು ಮಾತನಾಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆ ಉತ್ತರಿಸಿದ ಶಿಕೆ ಶಿವಕುಮಾರ್, ”ಡಿ.ಕೆ. ಸುರೇಶ್ ಬಹಳ ಪ್ರಜ್ಞಾವಂತ ಹಾಗೂ ಅನುಭವವಿರುವ ನಾಯಕರು. ಅವರಿಗೆ ಹೊಸ ನಾಯಕತ್ವ ಬೆಳೆಸಬೇಕು ಎಂಬ ಆಲೋಚನೆಗಳಿರುತ್ತವೆ. ಅವರಿಗೆ ಯಾವುದೇ ರೀತಿಯ ವೈರಾಗ್ಯವಿಲ್ಲ. ನಿಮ್ಮಷ್ಟಕ್ಕೆ ನೀವೇ ಕಲ್ಪನೆಗಳನ್ನು ಮಾಡಿಕೊಂಡರೆ ಅದು ನಿಮಗೆ ಬಿಟ್ಟ ವಿಚಾರ” ಎಂದರು.

”ಪಕ್ಷದ ಪ್ರಣಾಳಿಕೆ ಜಾರಿ, ನಾವು ಕೊಟ್ಟ ಮಾತು ಉಳಿಸಿಕೊಳ್ಳಬೇಕು, ಎಚ್ಚರಿಕೆಯಿಂದ ಜನರ ಸೇವೆ, ಸಂಸತ್ ಚುನಾವಣೆಯಲ್ಲಿ ಕಾರ್ಯಕರ್ತರ ಸಂಘಟನೆ ಮಾಡಲು ಜಿಲ್ಲಾ ಉಸ್ತುವಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಮತ್ತೆ ಕೆಲವರಿಗೆ ಜಾಬ್ದಾರಿ ನೀಡಬೇಕಿದೆ. ಉತ್ತಮ ಆಡಳಿತ ನೀಡುವುದು ಸೇರಿದಂತೆ ಅನೇಕ ವಿಚಾರವಾಗಿ ಚರ್ಚೆ ಮಾಡಲಾಗುವುದು. ನಮ್ಮ ನಾಯಕರುಗಳು ನಮ್ಮ ಅಧ್ಯಕ್ಷರು ಹಾಗೂ ಹೈಕಮಾಂಡ್ ಭೇಟಿಗೆ ಕಾಲವಕಾಶ ಕೇಳುತ್ತಿದ್ದರು. ಹೀಗಾಗಿ ಎಲ್ಲರನ್ನು ಒಟ್ಟಿಗೆ ಕರೆಸಲು ನಮ್ಮ ನಾಯಕರು ತೀರ್ಮಾನಿಸಿದ್ದಾರೆ. ಅವರು ಒಂದು ದಿನಾಂಕ ನೀಡಿದ್ದು, ಇನ್ನು ಅಂತಿಮವಾಗಿಲ್ಲ. ಇಂದು ಅಂತಿಮ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದಾರೆ” ಎಂದು ತಿಳಿಸಿದರು.

ಪರಿಷತ್ ಸ್ಥಾನಗಳ ಆಯ್ಕೆ ವಿಚಾರವಾಗಿ ಪ್ರತಿಕ್ರಿಸಿ, ”ನಾಮಪತ್ರ ಸಲ್ಲಿಸಲು ನಾಳೆಯವರೆಗೂ ಕಾಲಾವಕಾಶವಿದೆ. ನಮ್ಮ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದರಂತೆ ಅವಕಾಶ ನೀಡಲಾಗುವುದು. ನಾಮಪತ್ರ ಸಲ್ಲಿಕೆ ಮಾಡುವಾಗ ಯಾರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ತಿಳಿಯಲಿದೆ” ಎಂದು ಡಿಕೆ ಶಿವಕುಮಾರ್ ಹೇಳಿದರು.

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಹಾಸನಕ್ಕೆ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಎಚ್ ಕಾರು ಅಪಘಾತ: ಅಪಾಯದಿಂದ ಪಾರು

ಹಾಸನ : ಹಾಸನದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಹಾಸನದ ಮಾರ್ಗದಲ್ಲಿ ಸಚಿವ ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಬೇರೆ ವ್ಯವಸ್ಥೆ ಮೂಲಕ…

Leave a Reply

Your email address will not be published. Required fields are marked *