ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನೆ ಕೇಳಿದ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರಿಗೆ ಹಿಂದುತ್ವವಾದಿಗಳು ಹಾಗೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೇರಿದಂತೆ ಬಿಜೆಪಿ ಸದಸ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಕುಳ ನೀಡಿದ್ದಾರೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಶ್ವೇತಭವನ ಸೋಮವಾರ ಖಂಡನೆ ವ್ಯಕ್ತಪಡಿಸಿದೆ.
ಜೂನ್ 23ರಂದು, ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮೋದಿ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ್ತಿ, ”ಹಲವಾರು ಮಾನವ ಹಕ್ಕುಗಳ ಗುಂಪುಗಳು ಮೋದಿ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುತ್ತಿದೆ ಮತ್ತು ಸರ್ಕಾರದ ವಿರುದ್ಧ ಟೀಕೆ ಮಾಡುವವರನ್ನು ಮೌನಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ” ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು.
ಪತ್ರಿಕಾಗೋಷ್ಠಿಯ ನಂತರ ಸಿದ್ಧಿಕಿಯ ಮೇಲೆ ಹಿಂದುತ್ವ ಬೆಂಬಲಿಗರು ಮತ್ತು ಆಡಳಿತಾರೂಢ ಬಿಜೆಪಿ ಸದಸ್ಯರು ಆನ್ಲೈನ್‌ನಲ್ಲಿ ಮುಗಿಬಿದ್ದು, ಅವರನ್ನು ”ಪಾಕಿಸ್ತಾನದ ಪೋಷಕರ ಮಗಳು” ಮತ್ತು ”ಇಸ್ಲಾಮಿಸ್ಟ್” ಎಂದು ದಾಳಿ ಮಾಡಿದರು.
ಹಿಂದುತ್ವವಾದಿಗಳ ಮತ್ತು ಬಿಜೆಪಿ ಸದಸ್ಯರ ದಾಳಿಗೆ ಉತ್ತರವಾಗಿ ಟ್ವೀಟ್ ಮಾಡಿದ ಸಿದ್ದಿಕಿ, ತನ್ನ ತಂದೆಯೊಂದಿಗೆ ಭಾರತ ಕ್ರಿಕೆಟ್ ತಂಡವನ್ನು ಬೆಂಬಲಿಸುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿದರು. ಈ ಮೂಲಕ ತಾನು ಭಾರತದ ವಿರೋಧಿಯಲ್ಲ, ಭಾರತದ ಪರವಾಗಿರುವವಳು ಎಂದು ಸ್ಪಷ್ಟಪಡಿಸಿದಳು.
ಈ ಬಗ್ಗೆ ಸೋಮವಾರ, ಸ್ಟ್ರಾಟೆಜಿಕ್ ಕಮ್ಯುನಿಕೇಷನ್ಸ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂಯೋಜಕ ಜಾನ್ ಕಿರ್ಬಿಯನ್ನು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆ ಸಿದ್ದಿಕಿ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದರು. ಆ ಕಿರುಕುಳದ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ಸಂದರ್ಭದಲ್ಲೂ ಪತ್ರಕರ್ತರಿಗೆ ಯಾವುದೇ ಕಿರುಕುಳ ನೀಡುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಅದು … ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಮತ್ತು ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ … ಎಂದು ಹೇಳುವ ಮೂಲಕ ಹಿಂದುತ್ವವಾದಿಗಳ ಮತ್ತು ಬಿಜೆಪಿ ಸದಸ್ಯರ ದಾಳಿಯನ್ನು ಖಂಡಿಸಿದ್ದಾರೆ.
”ಅಮೆರಿಕಾ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ. ಪತ್ರಕರ್ತರು ತಮ್ಮ ಕೆಲಸವನ್ನು ಅವರು ಮಾಡುತ್ತಿರುವಾಗ ಅವರಿಗೆ ಬೆದರಿಕೆ ಅಥವಾ ಕಿರುಕುಳ ನೀಡುವಿದನ್ನು ನಾವು ಖಂಡಿತವಾಗಿಯೂ ಖಂಡಿಸುತ್ತೇವೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿದರು.
ಜೂನ್ 24 ರಂದು, ಸಿದ್ದಿಕಿ ಆನ್‌ಲೈನ್ ಕಿರುಕುಳವನ್ನು ಎದುರಿಸಿದ ನಂತರ ದಕ್ಷಿಣ ಏಷ್ಯಾದ ಪತ್ರಕರ್ತರ ಸಂಘವೂ ಸಹ ಬೆಂಬಲವನ್ನು ನೀಡಿತ್ತು. ”ನಮ್ಮ ಸಹೋದ್ಯೋಗಿ ಸಬ್ರಿನಾ ಸಿದ್ದಿಕಿ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಲು ನಾವು ಬಯಸುತ್ತೇವೆ, ಅವರು ಅನೇಕ ದಕ್ಷಿಣ ಏಷ್ಯಾದ ಮತ್ತು ಮಹಿಳಾ ಪತ್ರಕರ್ತರಂತೆ, ತಮ್ಮ ಕೆಲಸವನ್ನು ಸರಳವಾಗಿ ಮಾಡುವುದಕ್ಕಾಗಿ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವು ಯಾವುದೇ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದೆ ಮತ್ತು ಪಿಎಂ ಮೋದಿ ಅವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಮುನ್ನಡೆಸುತ್ತಿದ್ದಾರೆ. ಅವರಿಗೆ ಪ್ರಶ್ನೆ ಮಾಡುವುದು ನಮ್ಮ ಕರ್ತವ್ಯ ನಾವು ಅದನ್ನು ಮಾಡಿದ್ದೇವೆ” ಎಂದು ಅಸೋಸಿಯೇಷನ್ ಹೇಳಿದೆ.