ಇಂಫಾಲ್ : ಹಿಂಸಾಪೀಡಿತ ಮಣಿಪುರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಭೇಟಿಯನ್ನು ಮಣಿಪುರ ರಾಜ್ಯ ಬಿಜೆಪಿ ಅಧ್ಯಕ್ಷೆ ಅಧಿಕಾರಿಮಯುಂ ಶಾರದಾ ದೇವಿ ಶ್ಲಾಘಿಸಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಗಳ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿಗೆ ರಾಜಕೀಯ ಬಣ್ಣ ನೀಡಬಾರದೆಂಬ ಸಲಹೆಯೂ ಅವರಿಂದ ಬಂದಿದೆ.
“ಪ್ರಸ್ತುತ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ನೀಡಿರುವ ಭೇಟಿಯನ್ನು ಶ್ಲಾಘಿಸುತ್ತೇನೆ. ಆದರೆ ಸಮಸ್ಯೆಯನ್ನು ಪರಿಹರಿಸಿ ರಾಜ್ಯದಲ್ಲಿ ಶಾಂತಿ ಪುನಃಸ್ಥಾಪನೆಗೆ ಹೆಚ್ಚಿನ ಒತ್ತು ನೀಡಬೇಕು. ಸಮಸ್ಯೆಯನ್ನು ರಾಜಕೀಯಗೊಳಿಸಬಾರದು,” ಎಂದು ಸುದ್ದಿಗಾರರ ಜೊತೆ ಮಾತನಾಡಿದ ದೇವಿ ಹೇಳಿದರು.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ತಮ್ಮ ರಾಜೀನಾಮೆ ನೀಡುವುದನ್ನು ತಡೆಯಲು ಅವರಿಗೆ ಬೆಂಬಲಿಸುವ ಜನರ ನಡೆಯನ್ನು ದೇವಿ ಶ್ಲಾಘಿಸಿದರು,
“ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸ ಜನರಿಗಿರುವುದರಿಂದ ಅವರು ಮುಖ್ಯಮಂತ್ರಿಗೆ ಬೆಂಬಲ ಸೂಚಿಸಿದ್ದಾರೆ. ಈ ಬಾರಿ ಪರಿಸ್ಥಿತಿಯನ್ನು ನಿಯಂತ್ರಿಸದೇ ಇದ್ದರೆ ಅದು ಕೈಮೀರಿ ಹೋಗಬಹುದೆಂದು ಜನರಿಗೆ ತಿಳಿದಿದೆ. ಹಿಂದಿನ ಸರಕಾರದಿಂದಾಗಿ ಈಗಿನ ಪರಿಸ್ಥಿತಿ ಬಂದಿದೆ. ಜನರಿಗೆ ಬಿರೇನ್ ಸಿಂಗ್ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸವಿದೆ,” ಎಂದು ಅವರು ಹೇಳಿದರು.