ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ 4ನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಮನೆ ಯಜಮಾನಿಗೆ ಸರ್ಕಾರ 2000 ರೂಪಾಯಿ ನೀಡಲಿದೆ. ಆದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ, ಪಡಿತರ ಚೀಟಿ ಯಲ್ಲಿ ಮಹಿಳೆಯೇ ಮನೆಯ ಮುಖ್ಯಸ್ಥರಾಗಿರಬೇಕು. ಹೀಗಾಗಿ, ರೇಷನ್ ಕಾರ್ಡ್‌ನಲ್ಲಿ ಮನೆ ಮುಖ್ಯಸ್ಥರ ಬದಲಾವಣೆಗೆ ಈಗ ಅವಕಾಶ ನೀಡಲಾಗಿದೆ. ಇದರಿಂದ ಈ ಯೋಜನೆಯ ಫಲಾನುಭವಿಗಳಾಗಲಿರುವ 31 ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ. ರಾಜ್ಯದಲ್ಲಿ ಒಟ್ಟು 1.53 ಕೋಟಿ ಜನರು ಪಡಿತರ ಚೀಟಿಗಳನ್ನು ಹೊಂದಿದ್ದಾರೆ. 1.22 ಕೋಟಿ ಪಡಿತರ ಚೀಟಿಯಲ್ಲಿ ಮಾತ್ರ ಮನೆಯ ಮುಖ್ಯಸ್ಥರು ಮಹಿಳೆಯರು. ಇವರಷ್ಟೆ ಈಗ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಬಹುದು.
ಇನ್ನುಳಿದಂತೆ 31 ಕೋಟಿ ಪಡಿತರ ಚೀಟಿಗಳಲ್ಲಿ ತಿದ್ದುಪಡಿ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರ, ಪಡಿತರ ಚೀಟಿಗಳಲ್ಲಿ ಮನೆ ಮುಖ್ಯಸ್ಥರ ಹೆಸರನ್ನು ಮಹಿಳೆಯರ ಹೆಸರಿಗೆ ಬದಲಾಯಿಸಲು ಈಗ ಅವಕಾಶ ಮಾಡಿಕೊಟ್ಟಿದೆ. ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಪಡೆಯಲು ಯಾವೆಲ್ಲ ದಾಖಲೆ ಬೇಕು, ಯಾರು ಅರ್ಜಿ ಸಲ್ಲಿಸಬಹುದು ಎಂಬುದರ ವಿವರ ಇಲ್ಲಿದೆ.
ರೇಷನ್ ಕಾರ್ಡ್‌ನಲ್ಲಿ ಮನೆ ಮುಖ್ಯಸ್ಥರ ಹೆಸರು ಬದಲಾವಣೆ ಹೇಗೆ…?
ನಿಮ್ಮ ಸಮೀಪದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ. ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಸಂಬಂಧಿಸಿದ ಅರ್ಜಿಯನ್ನು ಭರ್ತಿ ಮಾಡಿ ಕೊಡಿ. ಅರ್ಜಿಯ ಜತೆಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕು. ಬಯೋಮೆಟ್ರಿಕ್ ದೃಡೀಕರಣದ ಮೂಲಕ ದಾಖಲೆಗಳನ್ನು ದೃಢೀಕರಿಸಬೇಕು.
ಪಡಿತರ ಸೇವಾ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅಲ್ಲಿ ನೀಡಲಾಗುವ ಸ್ವೀಕೃತಿಯನ್ನು ಜಾಗ್ರತೆಯಿಂದ ಸಂರಕ್ಷಿಸಿ ಇಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಕೆ ನಂತರ, ಆಹಾರ ಇಲಾಖೆಯ ಕಚೇರಿಯಿಂದ ನೋಂದಾಯಿತ ಮೊಬೈಲ್‌ಗೆ ಎಸ್‌ಎಂಎಸ್ ಬರಲಿದೆ. ಇದಾದ ಬಳಿಕ ನಿಮ್ಮಲ್ಲಿರುವ ಸ್ವೀಕೃತಿ ಪತ್ರವನ್ನು ಕೊಟ್ಟು, ಹೊಸ ಪಡಿತರ ಚೀಟಿ ಪಡೆಯಬಹುದು.
ಆನ್‌ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಮಾಡುವುದು ಹೇಗೆ..?
1.ಆಹಾರ ಇಲಾಖೆಯ ಅಧಿಕೃತ ತಾಣ https://ahara.kar.nic.in/ ಗೆ ಲಾಗ್ ಇನ್ ಆಗಬೇಕು.
2. ಮೇನ್ ಪೇಜ್‌ನಲ್ಲಿ ಕಾಣುವ ಇ-ಸೇವೆಗಳ ಮೇಲೆ ಕ್ಲಿಕ್ ಮಾಡಬೇಕು. ಇದರ ನೇರ ಲಿಂಕ್ (https://ahara.kar.nic.in/lpg/) ತೆರೆದುಕೊಳ್ಳುತ್ತದೆ.
3. ಅಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿಯ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಹೊಸ ಪೇಜ್ ತೆರೆಯುತ್ತದೆ.
4.ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್ ಕಾಣಿಸುತ್ತದೆ. ಅದರಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
5. ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ಡ್ ಪ್ರತಿಯನ್ನು ಅಪಲೋಡ್ ಮಾಡಬೇಕು. (ಇವುಗಳನ್ನು ಮೊದಲೇ ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು)
6. ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮಿಟ್ ಮಾಡಬೇಕು. ಈ ಅರ್ಜಿ ಸಲ್ಲಿಕೆಯ ರಿಜಿಸ್ಟರ್ ಆದ ನಂಬರ್ ಸಿಗಲಿದೆ.
7.ಈ ನಂಬರ್ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವುದಕ್ಕೆ ಅನುಕೂಲವಾಗುತ್ತದೆ.
ಮನೆ ಮುಖ್ಯಸ್ಥರ ಹೆಸರು ಬದಲಿಸಲು ಬೇಕಾಗುವ ದಾಖಲೆಗಳು:
ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ, ಅವರ ಮರಣ ಸಂಭವಿಸಿದರೆ ಸಾಧ್ಯವಾಗುತ್ತದೆ. ಈಗ ಗ್ಯಾರೆಂಟಿ ಯೋಜನೆಗಳ ಕಾರಣ, ಕುಟುಂಬ ಮುಖ್ಯಸ್ಥರ ಹೆಸರು ಬದಲಾವಣೆಗೆ ಸರ್ಕಾರ ಅವಕಾಶ ನೀಡಿದೆ.
ಮುಖ್ಯಸ್ಥರು ಮೃತಪಟ್ಟಿದ್ದಲ್ಲಿ, ಅವರ ಮರಣ ಪ್ರಮಾಣ ಪತ್ರ, ಪಡಿತರ ಚೀಟಿ, ಅರ್ಜಿದಾರರ ವಿಳಾಸದ ಪುರಾವೆ (ಆಧಾರ್ ಅಥವಾ ಇತರೆ ದಾಖಲೆ) ಇರಬೇಕು. ಇನ್ನು ಅರ್ಜಿದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ಪೂರಕ ದಾಖಲೆಗಳು, ಹೊಸ ಕುಟುಂಬ ಸದಸ್ಯರ ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಆಧಾರ್ ಕಾರ್ಡ್ ಕೊಡ ಬೇಕಾಗುತ್ತದೆ.