ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಕರ್ನಾಟಕ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ”ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ NEP ಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣ ರದ್ದುಗೊಳಿಸಲಾಗುವುದು” ಎಂದು ಹೇಳಿದ್ದಾರೆ.
”ಅಗತ್ಯವಾದ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡು NEP ರದ್ದುಗೊಳಿಸಬೇಕಿದೆ. ಈ ವರ್ಷ ಅದಕ್ಕೆ ಸಮಯ ಇರಲಿಲ್ಲ. ಚುನಾವಣೆ ಫಲಿತಾಂಶ ಬಂದು ಸರ್ಕಾರ ರಚನೆ ಆಗುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಈ ವರ್ಷ ಹಾಗೆಯೇ ಮುಂದುವರೆದಿದೆ. ಹಾಗಾಗಿ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡು ಮುಂದಿನ ಶೈಕ್ಷಣಿಕ ವರ್ಷದಿಂದ NEP ರದ್ದುಗೊಳಿಸಬೇಕಿದೆ” ಎಂದು ಹೇಳಿದರು.
”NEPಗೆ ಏಕ ಕಾಲದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರ ವಿರೋಧವಿದೆ. ದೇಶದಲ್ಲಿ ಎಲ್ಲೆಡೆ ಬಿಜೆಪಿ NEP ಜಾರಿಗೊಳಿಸದೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿ ನಾಡಿನ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ” ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೆ ಜೂನ್ ಮೊದಲ ವಾರದಂದೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು NEPಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ. ಅದು ನಾಗ್ಪುರ ಶಿಕ್ಷಣ ನೀತಿ ಎಂದು ಟೀಕಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದರು. NEP ಬದಲು ಹೊಸ ಶಿಕ್ಷಣ ನೀತಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದರು.
”ಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಅಷ್ಟೇ ಅಲ್ಲದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಅವೈಜ್ಞಾನಿಕ ಅಂಶಗಳನ್ನೊಳಗೊಂಡಿದೆ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿ ಇರುವ ನಮ್ಮ ದೇಶಕ್ಕೆ ಇಂತಹ ಏಕರೂಪದ ಶಿಕ್ಷಣ ಪದ್ಧತಿ ಹೊಂದಿಕೊಳ್ಳುವುದಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದರು.
”ರಾಜ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯುವ, ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣ ನೀಡಿ ಯುವಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸಲು ಒತ್ತು ನಿಟ್ಟಿನಲ್ಲಿ ಸ್ಥಳೀಯವಾದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನೊಳಗೊಂಡ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ತಿಳಿಸಿದ್ದರು. ಇದೀಗ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.