15 ವರ್ಷದ ಬಾಲಕಿಯೊಬ್ಬಳು ದಲಿತ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯನ್ನು ಅವರ ತಮ್ಮನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಈ ಘಟನೆ ಆಗಸ್ಟ್ 25ರಂದು ನಡೆದಿದ್ದು, ಮರುದಿನ 14 ವರ್ಷದ ಬಾಲಕ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯು ಒಬಿಸಿ ವರ್ಗಕ್ಕೆ ಸೇರಿದವಳಾಗಿದ್ದು, ದಲಿತ ಹುಡುಗನೊಂದಿಗಿನ ಸಂಬಂಧವನ್ನು ಆಕೆಯ ಮನೆಯವರು ವಿರೋಧಿಸಿದ್ದರು ಎಂದು ತಿಳಿದುಬಂದಿದೆ.
”ಶುಕ್ರವಾರ ರಾತ್ರಿ, ತನ್ನ ಸಹೋದರಿ ದಲಿತ ಯುವಕರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದ್ದೇನೆ ಎಂದು ಬಾಲಕ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾನೆ. ಕುಟುಂಬದ ಸದಸ್ಯರು ಹುಡುಗಿಯನ್ನು ಪ್ರಶ್ನಿಸಿದ್ದಾರೆ, ಅವಳು ತನ್ನ ಬಳಿ ಯಾವುದೇ ಸೆಲ್‌ಫೋನ್ ಇಲ್ಲ ಎಂದು ಹೇಳಿದ್ದಾಳೆ. ನಂತರ ಹುಡುಗಿಯ ತಾಯಿ ಅವಳ ಬಟ್ಟೆಗಳಲ್ಲಿ ಹುಡುಕಿ ಮೊಬೈಲ್‌ನ್ನು ಕಿತ್ತುಕೊಂಡಿದ್ದಾರೆ. ಆನಂತರ ಕುಟುಂಬದ ಸದಸ್ಯರು ಆಕೆಯ ಕೈಗಳನ್ನು ಕಟ್ಟಿ ಥಳಿಸಲು ಆರಂಭಿಸಿದ್ದಾರೆ. ಆಕೆಯ ಸಹೋದರರು ಕೊಡಲಿ ಮತ್ತು ಸುತ್ತಿಗೆಯಿಂದ ಹೊಡೆದಿದ್ದಾರೆ ಎಂದು” ಎಂದು ಸ್ಥಳೀಯ ಪೋಲೀಸ್ ಉಸ್ತುವಾರಿ ಸ್ಟೇಷನ್ ಹೌಸ್ ಹೇಳಿದ್ದಾರೆ.
ಮರುದಿನ ಬೆಳಗ್ಗೆ ಅಪ್ರಾಪ್ತ ಸಹೋದರ ಪೊಲೀಸ್ ಠಾಣೆಗೆ ಬಂದು ತನ್ನ ಅಕ್ಕನನ್ನು ಕೊಂದಿರುವುದಾಗಿ ಹೇಳಿದ್ದಾನೆ. ಪೊಲೀಸ್ ತಂಡವು ಬಾಲಕಿಯ ಮನೆಗೆ ತೆರಳಿ ಶವವನ್ನು ಪರೀಕ್ಷಗೆ ಕಳುಹಿಸಿದ್ದಾರೆ. ಕುಟುಂಬದ ಇತರ ಮೂವರು ಸದಸ್ಯರು – ಬಾಲಕನ ತಂದೆ, ತಾಯಿ ಮತ್ತು 19 ವರ್ಷದ ಸಹೋದರನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
”ಬಾಲಕನ ತಂದೆ ಮತ್ತು ಹಿರಿಯ ಸಹೋದರ ತಪ್ಪೊಪ್ಪಿಕೊಂಡಿದ್ದಾರೆ. ಅಪ್ರಾಪ್ತ ಬಾಲಕನನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು” ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.