ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ರಾಮನಾಥಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ ಎರಚಿ ಅವಮಾನ ಮಾಡಿದ್ದ ಕಿಡಿಗೇಡಿ ಘಟನೆಗೆ ತಪ್ಪು ಒಪ್ಪಿಕೊಂಡು ಕ್ಷಮೆ ಕೋರಿದ್ದಾನೆ.
ಸೋಮವಾರ ರಾತ್ರಿ ರಾಮನಾಥಪುರ ಗ್ರಾಮದ ಕಾಲೋನಿಯಲ್ಲಿನ ದಲಿತ ಸಂಘಟನೆಯ ನಾಮ ಫಲಕಕ್ಕೆ ಕಿಡಿಗೇಡಿಯೊಬ್ಬ ಸಗಣಿ ಸುರಿದು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಘಟನೆ ನಡೆದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಪ್ರಜಾ ವಿಮೋಚನಾ ಚಳುವಳಿಯ ರಾಜದಯಾಧ್ಯಕ್ಷ ಮುನಿಆಂಜಿನಪ್ಪ ಸೇರಿದಂತೆ ಸಂಘಟನೆಯ ಮುಖಂಡರು ಕಾರ್ಯಕರ್ತರು ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಪೊಲೀಸರು ದೂರು ದಾಖಲು ಮಾಡಿಕೊಂಡು ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಅಂಬೇಡ್ಕರ್ ಫಲಕಕ್ಕೆ ರಕ್ಷಣೆ ಮತ್ತು ಭದ್ರತೆಯೊಂದಿಗೆ ಮರುಸ್ಥಾಪನೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು.
ಈ ವೇಳೆ ಅಂಬೇಡ್ಕರ್ ನಾಮ ಫಲಕಕ್ಕೆ ಅವಮಾನಮಾಡಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದ್ದ ವೆಂಕಟೇಗೌಡ ಊರಿನ ಹಿರಿಯರ ಸಮ್ಮುಖದಲ್ಲಿ ಕ್ಷಮೆ ಕೋರಿ ನಾಮ ಇನ್ನೊಮ್ಮೆ ಈ ರೀತಿ ನಡೆದುಕೊಳ್ಳುವುದಿಲ್ಲ, ನಾಮ ಫಲಕವನ್ನು ನಾನೆ ಬರೆಸಿಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದರಿಂದ ಪ್ರಕರಣ ಮುಕ್ತಾಯವಾಗಿದೆ.
ಘಟನೆಯ ವಿವರ: ಸೆಪ್ಟೆಂಬರ್ 14 ರಂದು ರಾಮನಾಥಪುರ ಕಾಲೋನಿಯ ದಲಿತ ಸಂಘಟನೆಯ ನಾಮಫಲಕದಲ್ಲಿದ್ದ ಅಂಬೇಡ್ಕರ್ ಸ್ಟಿಕ್ಕರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು, ಈ ಘಟನೆಗೆ ಗ್ರಾಮಸ್ಥರು ಪೊಲೀಸ್ ದೂರು ನೀಡಿದ್ದರು. ಸ್ಥಳ ಪರಿಶೀಲನೆ ಮಾಡಿದ ಪೊಲೀಸರು ಎನ್‌ಸಿಆರ್ ನೀಡಿ ಹೊಸದಾಗಿ ಬಣ್ಣದಲ್ಲಿ ನಾಮ ಫಲಕ ಬರೆಸಿಕೊಳ್ಳಲು ತಿಳಿಸಿದ್ದರು.
ಅದರಂತೆ ಗ್ರಾಮಸ್ಥರು ಹೊಸದಾಗಿ ನಾಮ ಫಲಕ ಬರೆಸುವ ತಯಾರಿ ಮಾಡಿಕೊಂಡಿದ್ದರು, ಸೋಮವಾರ ರಾತ್ರಿ ಇದೇ ಗ್ರಾಮದ ವೆಂಕಟೇಗೌಡ ಅವರು ಡಬ್ಬದಲ್ಲಿ ಸಗಣಿಯನ್ನು ಕಲಿಸಿ ತಂದು ನಾಮ ಫಲಕದ ಮೇಲೆ ಸುರಿದ ಘಟನೆ ನಡೆದಿತ್ತು.
ವೆಂಕಟೇಗೌಡ ಸಗಣಿ ಸುರಿದ ಘಟನೆಯನ್ನು ಕಾಲೋನಿಯ ಕೆಲವರು ನೋಡಿ ಪ್ರಶ್ನೆ ಮಾಡಿ ಕೂಗಿಕೊಂಡಿದ್ದಾರೆ. ಕಾಲೋನಿಯ ಎಲ್ಲ ಜನರು ಅಲ್ಲಿಗೆ ಬರುವಷ್ಟರಲ್ಲಿ ಕಿಡಿಗೇಡಿ ಓಡಿ ಹೋಗಿದ್ದ.
ಘಟನೆಗೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಸಿಪಿಐ ಮಂಜುನಾಥ್ ದೂರು ದಾಖಲಿಸಿಕೊಂಡಿದ್ದರು.
ಊರಿನ ಹಿರಿಯರು ಮುಖಂಡರು ಸೇರಿ ವೆಂಕಟೇಗೌಡ ತಪ್ಪು ಒಪ್ಪಿಕೊಂಡು ಕ್ಷಮೆ ಕೋರುವಂತೆ ಮಾಡಿ, ಗ್ರಾಮದ ಪ್ರಮುಖ ವೃತ್ತದಲ್ಲಿ ನಾಮ ಫಲಕ ಹಾಕಿಸಿಕೊಡುವಂತೆ ಸಂಧಾನ ಮಾಡುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಜಾ ವಿಮೋಚನಾ ಚಳುವಳಿಯ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ, ಪದಾಧಿಕಾರಿಗಳಾದ ತಿಮ್ಮರಾಜು, ಮುನಿಆಂಜಿನಪ್ಪ, ತಳಗವಾರ ಪುನೀತ್, ಅರುಣಾ, ತ್ರಿವೇಣಿ, ಆನಂದಮ್ಮ ಮುಂತಾದವರು ಉಪಸ್ಥಿತರಿದ್ದರು.