ದೊಡ್ಡಬಳ್ಳಾಪುರ: ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಹಲ್ಲೆ ಮಾಡಿದ್ದಲ್ಲದೇ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಶ್ರೀರಾಮಸೇನೆ ಸಂಘಟನೆಯ 16 ಮಂದಿ ಮತ್ತು ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಏಳು ಅರೋಪಿಗಳನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ಬೆಳಿಗ್ಗೆ 5.45 ರ ಸಮಯದಲ್ಲಿ ಇನ್ನೋವಾ, ಮಾರುತಿ ಸ್ವಿಫ್ಟ್, ಮಾರುತಿ ಓಮ್ನಿ, ಬೀಝಾ ಕಾರು ಹಾಗೂ ಬೈಕುಗಳಲ್ಲಿ ಬಂದ 25-30 ಆರೋಪಿಗಳು ನಗರದ ಡಾ.ಬಿಆರ್.ಅಂಬೇಡ್ಕರ್ ವೃತ್ತದ ಬಳಿ ಗೋಮಾಂಸ ಸಾಗಿಸುತ್ತಿದ್ದ ವಾಹನಗಳನ್ನು ತಡೆದು ಮೊಬೈಲ್ ಕಸಿದುಕೊಂಡು ಹಲ್ಲೆಮಾಡಿದ್ದಾರೆ ಎಂದು ಗೌರಿಬಿದನೂರಿನ ಟಿಪ್ಪುನಗರ ನಿವಾಸಿ ಯಾಸಿನ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಕನಸವಾಡಿ ಗ್ರಾಮದ ಎಸ್. ರಮೇಶ( 42), ತಾಲೂಕು ಅಧ್ಯಕ್ಷ ಕರೇನಹಳ್ಳಿ ಪವನ್(31), ಕನಸವಾಡಿ ಕಾಲೋನಿಯ ಪ್ರಶಾಂತ್ ( 37) ಕಲ್ಲುಕೋಟೆ ನಿವಾಸಿ ದೇವರಾಜು (25), ಮುದ್ದೇನಹಳ್ಳಿಯ ದೇವರಾಜು (28), ತೂಬಗೆರೆಯ ಕುಮಾರ್ ( 27), ಮುಕ್ಕಡಿಘಟ್ಟದ ವಿಜಯಕುಮಾರ್( 25 ), ತಿಮ್ಮೋಜನಹಳ್ಳಿಯ ಮನೋಜ್ ಕುಮಾರ್ ( 24), ದರ್ಗಾಜೋಗಹಳ್ಳಿಯ ರಾಜೇಶ್ (21), ಜಾಲಪ್ಪ ಕಾಲೇಜು ರಸ್ತೆಯ ನಿವಾಸಿ ಮಂಜುನಾಥ್ (30), ಪಾಲನಜೋಗಹಳ್ಳಿಯ ರಮೇಶ್ (52), ಶ್ರೀರಾಮಸೇನೆ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಲೊಟ್ಟೆ ಗೊಲ್ಲಹಳ್ಳಿಯ ಸುಂದರೇಶ್ ನರ್ಗಲ್ (38), ಇಸ್ತೂರಿನ ಕೆ. ಜಗದೀಶ್ (25), ಕನಸವಾಡಿ ಗ್ರಾಮದ ಪುನೀತ(25), ಬೀಡಿಕೆರೆಯ ಅಜಿತ್(36), ಬೆಂಗಳೂರಿನ ದೊಡ್ಡಬಿದರಕಲ್ಲು ಗ್ರಾಮದ ಬಿ.ವಿ.ನಾಗರಾಜ, (48) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು, ಅರ್ಬನ್ ಕ್ರೂಸರ್ ಕಾರು, ಹೋಂಡಾ ಗ್ಲಾಮರ್ ಬೈಕ್, 14 ಮೊಬೈಲ್ ಫೋನ್ ಹಾಗೂ ಗೋಮಾಂಸ ಸಾಗಿಸುತ್ತಿದ್ದವರಿಂದ ಕಸಿದುಕೊಂಡಿದ್ದ 5 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಪವನ್ ಎಂಬುವರು ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದವರ ವಿರುದ್ಧ ಪ್ರತಿ ದೂರು ನೀಡಿದ್ದು, ಅದರನ್ವಯ
1.ಯಾಸೀನ್ (43) ಗೌರಿಬಿದನೂರು
2.ಜಾಕೀರ್ (36) ಅಲಿಪುರ
3.ಎಸ್ ಖಲೀಂ, ಹಿಂದೂಮರ, ಆಂಧ್ರಪ್ರದೇಶ
4.ಮೆಹಬೂಬ್ ಪಾಷ (20), ಹಿಂದೂ ಮರ, ಆಂಧ್ರಪ್ರದೇಶ,
5. ಆಜಮ್ (28), ಅಲ್ಲಿಪುರ
6.ಇಮ್ರಾನ್(31),
7. ಏಜಾಜ್ (35), ಹಿಂದೂಪುರ, ಆಂಧ್ರಪ್ರದೇಶ ಎಂಬುವರನ್ನೂ ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಪುರದಿಂದ ಬೆಂಗಳೂರು ಅಕ್ರಮವಾಗಿ ಗೋಮಾಂಸ ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಆಧರಿಸಿ ನಮ್ಮ ಕಾರ್ಯಕರ್ತರು ಹಾಗೂ ಸ್ಥಳೀಯರು ಟಿ.ಬಿ.ವೃತ್ತದಲ್ಲಿ ವಾಹನ ತಡೆಯಲು ಮುಂದಾದಾಗ ನಮ್ಮವರ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಿದರು. ಐದು ವಾಹನಗಳಲ್ಲಿ ಸುಮಾರು 30 ಟನ್ ಗೋಮಾಂಸ ಸಾಗಿಸುತ್ತಿದ್ದರು. ಈ ವಾಹನಗಳಲ್ಲಿ ಮಚ್ಚು ಚಾಕು ಇತ್ತು ಎಂದು ಪವನ್ ದೂರಿನಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಗೋಮಾಂಸ ನಿಷೇಧ ಇದ್ದರೂ ಸಹ ಗೋವುಗಳನ್ನು ಕೊಂದು, ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಗೆ ಸಾಗಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂಪುರದಿಂದ ಬೆಂಗಳೂರಿನ ಶಿವಾಜಿನಗರಕ್ಕೆ ಅಕ್ರಮ ಗೋಮಾಂಸ ಸಾಗಣೆ ಮಾಡುತ್ತಿದ್ದವರ ಮೇಲೆ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಕಾನೂನು ಉಲ್ಲಂಘಿಸಿ ದಾಳಿ ಮಾಡಿ, ಗೋಮಾಂಸ ಸಾಗಿಸುತ್ತಿದ್ದವರ ಮೇಲೆ ಹಲ್ಲೆ ಮಾಡಿ, ಕಾರಿಗೆ ಬೆಂಕಿ ಇಟ್ಟು ಅನೈತಿಕ ಪೊಲೀಸ್‌ಗಿರಿ ತೋರಿದ್ದರು.