ಮಿಜೋರಾಂ: ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕಿಂತ ಇಸ್ರೇಲ್ ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಹೆಚ್ಚು ಕಳವಳಗೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಟೀಕಿಸಿದ್ದಾರೆ.
ಐಜೋಲ್ನ ರಸ್ತೆಗಳಲ್ಲಿ 2 ಕಿ.ಮೀ. ಪಾದಯಾತ್ರೆ ಕೈಗೊಂಡ ಬಳಿಕ ರಾಜಭವನದ ಸಮೀಪ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೆರೆಯ ಮಣಿಪುರ ಏಕೀಕೃತ ರಾಜ್ಯವಾಗಿ ಉಳಿದಿಲ್ಲ. ಬದಲಾಗಿದೆ, ಅದು ಜನಾಂಗೀಯ ನೆಲೆಯಲ್ಲಿ ಎರಡು ರಾಜ್ಯಗಳಾಗಿ ವಿಭಜನೆಗೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರಕಾರ ಇಸ್ರೇಲ್ ನಲ್ಲಿ ಏನು ಸಂಭವಿಸುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಹೊಂದಿದೆ. ಆದರೆ, ಜನರು ಹತ್ಯೆಗೀಡಾದ, ಮಹಿಳೆಯರು ಅತ್ಯಾಚಾರಕ್ಕೆ ಒಳಗಾದ, ಮಕ್ಕಳು ಕೊಲ್ಲಲ್ಪಟ್ಟ ಮಣಿಪುರದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಆಸಕ್ತಿ ಇಲ್ಲ. ಇದು ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಅವರು ಹೇಳಿದರು.