ನೆಲಮಂಗಲ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವಲ್ಲಿ ಎನ್‌ಎಸ್. ಎಸ್.ಶಿಬಿರಗಳ ಸಹಕಾರಿಯಾಗಲಿವೆ ಎಂದು ಕಣೇಗೌಡನಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಕಣೇಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲಾಆವರಣದಲ್ಲಿ ಸೋಮವಾರ ಸಂಜೆ ಶ್ರೀಮುರುಳಿ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುವಜನತೆ ದೇಶದ ಜವಬ್ದಾರಿಯುತ ನಾಗರೀಕರಾಗಿ ಬೆಳೆಯಲಿದ್ದಾರೆ. ಗ್ರಾಮೀಣಭಾಗದ ಜನಜೀವನದ ಅರಿವು ವಿದ್ಯಾರ್ಥಿಗಳಿಗೆ ಇರಬೇಕಿದೆ. ಭವಿಷ್ಯದಲ್ಲಿ ರಾಜಕಾರಣಿ, ಅಧಿಕಾರಿ, ಉದ್ಯಮಿಗಳಾಗುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದಾಗಿದೆ. ಶ್ರಮದಾನದ ಜತೆಗೆ ಸ್ವಚ್ಛತೆ, ಆರೋಗ್ಯ ಪರಿಸರ ಸಂರಕ್ಷಣೆಯಂತಹ ಕೆಲಸಗಳನ್ನು ಮಾಡುವ ಎನ್.ಎಸ್.ಎಸ್ ಕಾರ್ಯ ಅಭಿನಂದನೀಯ ಎಂದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ ಕೃಷ್ಣಪ್ಪ ವಿದ್ಯಾರ್ಥಿ ದಿಸೆಯಲ್ಲಿ ಬರುವ ಪ್ರತಿಯೊಂದು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಎನ್.ಎಸ್.ಎಸ್ ಶಿಬಿರ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ವಿಷಯವಾಗಿ ಉಳಿಯಲಿದೆ ಎಂದರು.
ಶಿಬಿರಾವಧಿಯಲ್ಲಿ ಗ್ರಾಮದ ಸರ್ಕಾರಿ ಶಾಲೆ, ದೇವಾಲಯಗಳ ಸ್ವಚ್ಛಗೊಳಿಸುವುದು, ಗಿಡನೆಡುವುದು, ಆರೋಗ್ಯ ಕುರಿತಾದ ಜನಜಾಗೃತಿಯ ಜತೆಗೆ ಮಳೆನೀರು ಕೊಯ್ದು ಪದ್ದತಿ ಅಳವಡಿಕೆ, ಇಂಗುಗುಂಡಿ ನಿರ್ಮಾಣ ಕುರಿತಾಗಿ ಗ್ರಾಮಸ್ಥರಲ್ಲಿ ಜನಸಂಪನ್ಮೂಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಶಿಬಿರಾಧಿಕಾರಿ ಎಂ.ಪಿ.ಮಾರುತಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಕೃಷ್ಣಪ್ಪ ರಾಷ್ಟ್ರೀಯ ಸೇವಾ ಯೋಜನೆಯ ಧ್ವಜಾರೋಹಣ ನೆರವೇರಿಸಿದರು. ನಂತರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಹಸಿರು ಗಿಡನೆಟ್ಟು ಶಿಬಿರಕ್ಕೆ ಚಾಲನೆ ನೀಡಲಾಯಿತು.
ಸಂದರ್ಭದಲ್ಲಿ ಕಣೇಗೌಡನಹಳ್ಳಿ ಗ್ರಾ.ಪಂ ಸದಸ್ಯ ಮಾರೇಗೌಡ, ಮುನಿರಾಜು, ಕಾರ್ಯದರ್ಶಿ ಹನುಮಂತರಾಯಪ್ಪ, ಸಿಬ್ಬಂದಿ ಸಿ.ಪಿ.ಶ್ರೀನಿವಾಸ್, ಯುವಶಕ್ತಿ ಸಂಸ್ಥೆ ರಾಜ್ಯ ಸಂಚಾಲಕ ಡಿ.ಆ.ಅನಂತ್‌ಕುಮಾರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಚನ್ನೇಗೌಡ, ಸಹಶಿಬಿರಾಧಿಕಾರಿ ಶಿವನಾಯಕ್, ಮುಖಂಡ ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.