ಶಿವಮೊಗ್ಗ: ದಲಿತ ಯುವತಿಯನ್ನು ಪ್ರೀತಿಸಿ, ವಿವಾಹವಾದ ಯುವಕನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಹೊರಬೈಲು ಗ್ರಾಮದಲ್ಲಿ ನಡೆದಿದೆ.
ಜೋಗಿ ಸಮುದಾಯಕ್ಕೆ ಸೇರಿದ ಯುವಕ ಮತ್ತು ದಲಿತ ಯುವತಿ ಸೆ. 10ರಂದು ವಿವಾಹವಾಗಿದ್ದಾರೆ. ಅಲ್ಲದೆ, ನ.27ರಂದು ವಿವಾಹ ನೋಂದಣಿಯನ್ನೂ ಮಾಡಿದ್ದಾರೆ. ಆದರೆ, ಅವರ ವಿವಾಹದಿಂದ ಅಸಮಾಧಾನಗೊಂಡ ಸಮುದಾಯದ ಮುಖಂಡರು, ಯುವಕನ ಕುಟುಂಬಸ್ಥರೊಂದಿಗೆ ಯಾರೂ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ತಪ್ಪಿದಲ್ಲಿ 1,000 ರೂ. ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಮೇಲೆ ಹೇರಿರುವ ಬಹಿಷ್ಕಾರದ ವಿರುದ್ಧ ಯುವಕ -ಯುವತಿ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.