ಉತ್ತರಪ್ರದೇಶ: ಪೊಲೀಸ್ ಕಾನ್ಸ್‌ಟೆಬಲ್ ಒಬ್ಬ 25 ವರ್ಷದ ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಮಂಗಳವಾರ ನಡೆದಿದೆ.
ಮಹಿಳೆಯ ಶವ ಪೊಲೀಸ್ ಕಾನ್ಸ್‌ಟೆಬಲ್ ವಾಸ ಮಾಡುತ್ತಿದ್ದ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಮಹಿಳೆಯು ಪೊಲೀಸ್ ಕಾನ್ಸ್‌ಟೆಬಲ್ ಮನೆಗೆ ಘಟನೆ ಸಂಭವಿಸಿದ ಒಂದು ದಿನ ಮುನ್ನ ಭೇಟಿ ನೀಡಿದ್ದರು.
’27 ವರ್ಷದ ಪೊಲೀಸ್ ಕಾನ್ಸ್‌ಟೆಬಲ್ ರಾಘವೇಂದ್ರ ಸಿಂಗ್ ಎಂಬಾತನನ್ನು 25 ವರ್ಷದ ದಲಿತ ಸಮುದಾಯದ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 306, 376 ಹಾಗೂ ಎಸ್‌ಸಿಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಸಹಾಯಕ ಪೊಲೀಸ್ ಆಯುಕ್ತರಾದ ಆರ್ ಕೆ ಸಿಂಗ್ ತಿಳಿಸಿದ್ದಾರೆ.
“ಮೂಲತಃ ಝಾನ್ಸಿಯ ಪ್ರದೇಶದವನಾದ ಕಾನ್ಸ್‌ಟೆಬಲ್ ರಾಘವೇಂದ್ರ ಸಿಂಗ್ ಆಗ್ರಾದ ಬೆಳನ್‌ಗಂಜ್ ಪ್ರದೇಶದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ. ಮೃತ ಮಹಿಳೆ ಹಾಗೂ ಆರೋಪಿ ಕಳೆದ ಕೆಲ ದಿನಗಳಿಂದ ಪರಿಚಿತರಾಗಿದ್ದರು. ಮಹಿಳೆಯು ಸ್ಥಳೀಯ ಖಾಸಗಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು” ಎಂದು ಆರ್ ಕೆ ತಿಳಿಸಿದ್ದಾರೆ.
ಮಹಿಳೆಯ ಕುಟುಂಬದ ಸದಸ್ಯರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
“ನಾವು ರಾಘವೇಂದ್ರ ಸಿಂಗ್ ಮನೆಗೂ ಭೇಟಿ ನೀಡಿದ್ದೆವು. ಆದರೆ ನಮ್ಮ ತಂಗಿಯೊಟ್ಟಿಗೆ ಮದುವೆ ಪ್ರಸ್ತಾಪವನ್ನು ಆರೋಪಿಯ ಕುಟುಂಬ ನಿರಾಕರಿಸಿತ್ತು. ಆದರೂ ಈತ ನಮ್ಮ ತಂಗಿಯೊಂದಿಗೆ ಸಂಪರ್ಕದಲ್ಲಿದ್ದ” ಎಂದು ಮಹಿಳೆಯ ಸಹೋದರ ತಿಳಿಸಿದ್ದಾರೆ.