ಮೈಸೂರು: ಶ್ರೀ ರಾಮನ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತರು ಘೇರಾವ್ ಮಾಡಿ ಪೂಜೆಗೆ ಅವಕಾಶ ಕಲ್ಪಿಸದೆ ವಾಪಸ್ ಕಳುಹಿಸಿದ್ದಾರೆ.
ಇದು ತಾಲೂಕಿನ ಹಾರೋಹಳ್ಳಿಯಲ್ಲಿ ಇಂದು(ಸೋಮವಾರ) ಬೆಳಗ್ಗೆ ನಡೆದಿದ್ದು, ಆಯೋಧ್ಯೆ ರಾಮಮಂದಿರದ ರಾಮನ ವಿಗ್ರಹ ಕೆತ್ತನೆಗೆ ಕಲ್ಲು ಸಿಕ್ಕ ಸ್ಥಳದಲ್ಲಿ ಘಟನೆ ನಡೆದಿದೆ.
ಆಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ರಾಮಲಲ್ಲಾ ಮೂರ್ತಿಯ ಕೃಷ್ಣ ಶಿಲೆ ಕಲ್ಲು ಹಾರೋಹಳ್ಳಿ ಬಳಿಯ ಗಯಜ್ಜೇಗೌಡನಪುರದ ದಲಿತ ಸಮುದಾಯಕ್ಕೆ ಸೇರಿದ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿತ್ತು. ಈ ಜಾಗದಲ್ಲಿ ರಾಮನ ದೇವಸ್ಥಾನ ನಿರ್ಮಾಣ ಮಾಡುವುದಾಗಿ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಇಂದು(ಸೋಮವಾರ) ಬೆಳಗ್ಗೆ ಭೂಮಿಪೂಜೆ ಮತ್ತು ರಾಮನ ಪೂಜೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆಂದು ಸ್ಥಳಕ್ಕೆ ಆಗಮಿಸಿದ ಸಂಸದ ಪ್ರತಾಪ್ ಸಿಂಹರನ್ನು ಸ್ಥಳೀಯ ದಲಿತ ಮುಖಂಡರು ಘೇರಾವ್ ಮಾಡಿ ʼಗೋಬ್ಯಾಕ್ ಪ್ರತಾಪ್ ಸಿಂಹʼ, ʼದಲಿತ ವಿರೋಧಿ ಪ್ರತಾಪ್ ಸಿಂಹʼ ಎಂದು ಘೊಷಣೆಗಳನ್ನು ಕೂಗಿದ್ದಾರೆ.
ಇದನ್ನು ಸಮರ್ಥಿಸಲು ಪ್ರಯತ್ನಿಸಿದ ಸಂಸದರು, ʼನನ್ನ ಹೇಳಿಕೆಯನ್ನು ತಿರುಚಲಾಗಿದೆ, ನಾನು ದಲಿತ ವಿರೋಧಿಯಲ್ಲʼ ಎಂದು ಪರಿಸ್ಥಿತಿ ಸಮಾಧಾನಗೊಳಿಸಲು ಮುಂದಾದರು. ಗ್ರಾಮಸ್ಥರು ಇನ್ನಷ್ಟು ಕೊಪಗೊಂಡು ʼನೀವು ಮೊದಲು ಇಲ್ಲಿಂದ ಹೊರಟು ಹೋಗಿ, ನೀವು ಏನು ಹೇಳುವುದು ಬೇಡʼ ಎಂದು ಪಟ್ಟುಹಿಡಿದರು.
ಮಾಜಿ ತಾಲೂಕು ಪಂಚಾಯತಿ ಸದಸ್ಯ ಹಾರೋಹಳ್ಳಿ ಸುರೇಶ್ ಮಾತನಾಡಿ “ನೀವೊಬ್ಬ ದಲಿತ ವಿರೋಧಿ. ನಿಮ್ಮ ನಡವಳಿಕೆಯಿಂದ ದಲಿತರ ಭಾವನೆಗೆ ಧಕ್ಕೆಯುಂಟಾಗಿದೆ. ಮಹಿಷ ದಸರಾ ಆಚರಣೆ ಸಂದರ್ಭದಲ್ಲಿ ದಲಿತರನ್ನು ತುಳಿದು ಹಾಕಿ ಬಿಡುತ್ತೇನೆ, ಹೊಸಕಿ ಹಾಕಿಬಿಡುತ್ತೇನೆ ಎಂದು ಬೆದರಿಸಿದ್ದ ನೀವು ದಲಿತರ ಜಮೀನಿಗೆ ಏಕೆ ಬರುತ್ತೀರಿ? ಮೊದಲು ಹೊರಟು ಹೋಗಿ” ಎಂದು ಹೇಳಿದರು.