ನೆಲಮಂಗಲ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಂದು ನೆಲಮಂಗಲದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ. ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಗ್ರಾಮ ಆಡಳಿತ ಅಧಿಕಾರಿಗಳು ಇಂದು ತಮ್ಮ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ, ಆನ್ಲೈನ್ ಆಪ್ಗಳ ಮೂಲಕ ಮಾಡುವ ಕೆಲಸಗಳಿಗೆ ನಿರ್ಬಂದ ಏರಿ, ಕೈ ತೋಳಿಗೆ ಕಪ್ಪು ಪಟ್ಟಿ ದರಿಸಿ ಅನಿರ್ದಿಷ್ಟಾವದಿ ಮುಷ್ಕರ ನಡೆಸುತ್ತಿದ್ದಾರೆ. ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಮುಷ್ಕರಕ್ಕೆ ಬೆಂಬಲ ನೀಡಿದರು.
ಪ್ರತಿಭಟನೆ ಕುರಿತು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಆಕಾಶ್ ಗಾಯಕ್ವಾಡ್ ಮಾತನಾಡಿ ನಮ್ಮದು ತಾಂತ್ರಿಕ ಹುದ್ದೆ ಅಲ್ಲ ಎಂದ ಮೇಲೆ ನಮ್ಮ ಮೇಲೆ ಈ ತಂತ್ರಜ್ಞಾನ ಆಧಾರಿತ ಕೆಲಸಗಳನ್ನ ಏಕೆ ಏರಬೇಕು. ತಂತ್ರಜ್ಞಾನಕ್ಕೆ ತಕ್ಕಂತೆ ಯಾವುದೇ ಒಂದು ಸಣ್ಣ ಸಲಕರಣೆಗಳನ್ನು ಇದುವರೆಗು ಸರ್ಕಾರ ನಮಗೆ ನೀಡಿಲ್ಲ. ನಮ್ಮ ಮೊಬೈಲ್ ಫೋನ್ಗಳಲ್ಲೆ ಕಚೇರಿಯ ಎಲ್ಲಾ ಕೆಲಸಗಳನ್ನು ನಿರ್ವಹಿಸಬೇಕು. ಇದರಿಂದ ಕೆಲಸ ಮಾಡಲು ಸಾಕಷ್ಟು ತೊಂದರೆಯಾಗುತ್ತಿದೆ, ಹಾಗಾಗಿ ಸರ್ಕಾರ ಕೂಡಲೇ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ರಘುಪತಿ ಮಾತನಾಡಿ ನಾವೇನು ಯಂತ್ರಗಳಲ್ಲ ಸರ್ಕಾರ ನಮ್ಮನ್ನು ಮನುಷ್ಯರಂತೆ ಪರಿಗಣಿಸಬೇಕು, ಕಳೆದ ಒಂದು ಕಂದಾಯ ವರ್ಷದಲ್ಲಿ ಒಟ್ಟು 17 ಜನ ಗ್ರಾಮ ಆಡಳಿತ ಅಧಿಕಾರಿಗಳು ಕೆಲಸದ ಒತ್ತಡ ಸೇರಿದಂತೆ ಹಲವು ಕಾರಣಗಳಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಕೆಲಸ ಮಾಡುತ್ತಿರುವ ಉಳಿಕೆ ಆಡಳಿತಾಧಿಕಾರಿಗಳಿಗೆ ಜೀವದ ಮೇಲೆ ಭಯ ಬಂದಿದೆ. ಒಮ್ಮೆಲೆ ಮೂರ್ನಾಲ್ಕು ಕೆಲಸಗಳನ್ನು ಹೇಳುವುದು ಬಿಟ್ಟು ಒಂದಾದ ನಂತರ ಇನ್ನೊಂದು ಕೆಲಸ ಹೇಳಿದರೆ ನಾವು ನೆಮ್ಮದಿಯಿಂದ ಉಸಿರಾಡಬಹುದು ಎಂದರು. ನಮ್ಮನ್ನು ತಾಂತ್ರಿಕ ಹುದ್ದೆ ಎಂದು ಪರಿಗಣಿಸಿ ನಮ್ಮನ್ನು ಮೇಲ್ದರ್ಜೆ ಏರಿಸಿ. ಹಾಗೂ 20 ವರ್ಷಗಳಿಂದ ಕೆಲಸ ಮಾಡಿರುವವರುನ್ನು ಸಹ ಇದುವರೆಗು ಮೇಲ್ದರ್ಜೆಗೆ ಏರಿಸಿಲ್ಲ. ದಯವಿಟ್ಟು ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದರು.
ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳು: ಮೊಬೈಲ್ ಆಪ್, ವೈಬ್ ಅಪ್ಲಿಕೇಷನ್ ಸೇರಿದಂತೆ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡವಿದ್ದು ಮೊಬೈಲ್,ಲ್ಯಾಪ್ಟ್ಯಾಪ್, ಇಂಟರ್ನೆಟ್, ಸ್ಕಾನರ್ ವ್ಯವಸ್ಥೆ ಕಲ್ಪಿಸಬೇಕು. ನೌಕರರಿಗೆ ಉತ್ತಮ ಗುಣಮಟ್ಟದ ಟೇಬಲ್ ಖುರ್ಚಿ ವಿತರಣೆ, ಮೊಬೈಲ್, ಬೀರ್, ಸಿಯುಜಿ ಸಿಮ್, ಪ್ರಿಂಟರ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ನೌಕರರು ಪದೋತ್ನತಿಯಲ್ಲಿ ವಂಚಿತರಾಗಿದ್ದು ವಿವಿಧ ಹುದ್ದೆಗೆ ಮೇಲ್ದರ್ಜೆಗೇರಿಸಿ ಪದೋನ್ಮತಿ ಗೊಳಿಸಬೇಕು. ಅಂತರ್ ಜಿಲ್ಲಾ ಪತಿಪತ್ನಿ ವರ್ಗಾವಣೆ ಪ್ರಕರಣ, ಕಂದಾಯ ಇಲಾಖೆಯಲ್ಲಿ ೩ ವರ್ಷ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆ, ಮೊಬೈಲ್ ತಂತ್ರಾಂಶಗಳ ವಿಚಾರವಾಗಿ ಆಗಿರುವ ಅಮಾನತ್ತು ರದ್ದು ಪಡಿಸಬೇಕು. ಪ್ರಯಾಣ ಭತ್ಯೆಯನ್ನು ೫೦೦ರೂ ರಿಂದ ೩ಸಾವಿರ ರೂ ಹೆಚ್ಚಳ ಮಾಡಬೇಕು. ಕೆಲಸ ಆರಂಭ ಮತ್ತು ಅಂತ್ಯ ಎಲ್ಲಾ ಬಗ್ಗೆ ವರ್ಚುವಲ್ ಸಭೆಯನ್ನು ನಿಷೇಧಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಕಂದಾಯ ಇಲಾಖ ನೌಕರರ ಸಂಘದ ಅಧ್ಯಕ್ಷ ವಿ.ಎಸ್ ರವೀಂದ್ರ, ಖಜಾಂಚಿ ಪುಷ್ಪಲತಾ, ಮಾಜಿ ತಾ ಅಧ್ಯಕ್ಷ ವಾಸುದೇವ್, ಗ್ರಾಮ ಆಡಳಿತ ಅಧಿಕಾರಿಗಳಾದ ಮಾರುತಿ, ಬಸವಲಿಂಗಪ್ಪ ಚಲಗೇರಿ, ಶಿವಕುಮಾರ್, ಪಾರ್ಥಸಾರತಿ ಹಾಗೂ ಸೇರಿದಂತೆ ಹಲವು ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ಇಲಾಖೆ ನೌಕರರು, ಭೂಮಾಪನ ಇಲಾಖೆ ನೌಕರರು, ಗ್ರಾಮ ಸಹಾಯಕರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ವಾಸದೇವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿಂದ್ದರು.