ದೊಡ್ಡಬಳ್ಳಾಪುರ : ಭಾರತದಲ್ಲಿ ಈ ಕ್ಷಣಕ್ಕೂ ಅಸ್ಪೃಶ್ಯತೆ ಆಚರಣೆ ಜೀವಂತವಿದೆ. ಅದಕ್ಕೆ ಸಾಕ್ಷಿ ಎಂಬಂತೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ, ಕೊಪ್ಪಳದ ಮರಕುಂಬಿ ದಲಿತರ ದೌರ್ಜನ್ಯ ಪ್ರಕಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 98 ಸವರ್ಣಿಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದೆ, ಆದರೂ ಬುದ್ದಿ ಕಲಿಯದ ಸವರ್ಣಿಯರು ದಲಿತರ ಮೇಲೆ ದೌರ್ಜನ್ಯವನ್ನು ಮುಂದುವರೆಸುತ್ತಲೇ ಬಂದಿದ್ದಾರೆ.
ರಾಜ್ಯ ರಾಜಧಾನಿಯಿಂದ ಕೇವಲ 40 ಕಿ.ಮೀ ಅಂತರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಣೆ ಇಂದಿಗೂ ಜೀವಂತವಾಗಿದೆ. ಇಲ್ಲಿನ ದೇವಸ್ಥಾನದ ಒಳಗೆ ದಲಿತರ ಪ್ರವೇಶವಿಲ್ಲ, ಬಾಗಿಲಲ್ಲೇ ನಿಂತು ದೇವರಿಗೆ ಕೈ ಮುಗಿಯ ಬೇಕು, ದಲಿತರ ಪೂಜಾ ಸಾಮಾಗ್ರಿಗಳನ್ನು ಸಹ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗುವುದಿಲ್ಲ, ಕಾಂಪೌಂಡ್ ಹೊರಗಡೆ ದೇವರಿಗೆ ಹಣ್ಣುಕಾಯಿ ಕೊಟ್ಟು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಇದೇ ವಿಚಾರಕ್ಕೆ ನಿನ್ನೆ ದಲಿತರು ಮತ್ತು ಸವರ್ಣಿಯರ ಮಧ್ಯೆ ವಾಗ್ವಾದ ನಡೆದಿದ್ದು, ಸವರ್ಣಿಯರು ದಲಿತ ಯುವಕರನ್ನು ತಳ್ಳಾಡಿ ರಕ್ತ ಗಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಲ್ಲಾತಹಳ್ಳಿ ಗ್ರಾಮದಲ್ಲಿ ಸವರ್ಣಿಯರು ಬಹಳ ಹಿಂದಿನಿಂದ ಅಸ್ಪೃಶ್ಯತೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ, ಹಳೆ ತಲೆಮಾರಿನ ದಲಿತರು ಇದ್ಯಾವುದನ್ನು ಪ್ರಶ್ನೆ ಮಾಡದೆ ತಮ್ಮ ಮೇಲಿನ ದೌರ್ಜನ್ಯಗಳನ್ನ ಸಹಿಸಿಕೊಂಡಿದ್ದರು. ಆದರೆ ಇಂದಿನ ವಿದ್ಯಾವಂತ ಯುವಕರು ದಲಿತರ ಮೇಲೆ ನಡೆಸುತ್ತಿರುವ ಅಸ್ಪೃಶ್ಯತೆ ಆಚರಣೆಯನ್ನ ಪಶ್ನೆ ಮಾಡಲು ಆರಂಭಿಸಿದ್ದಾರೆ. ನಿನ್ನೆ ಇದೇ ವಿಚಾರ ಗ್ರಾಮದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ.
ಮಲ್ಲತ್ತಹಳ್ಳಿ ಗ್ರಾಮದಲ್ಲಿ ಚನ್ನಕೇಶವ, ಮದ್ದೂರಮ್ಮ, ಗಂಗಮ್ಮ ಮತ್ತು ಮಾರಮ್ಮ ದೇವಸ್ಥಾನಗಳಿವೆ, ಚನ್ನಕೇಶವ ಮತ್ತು ಮದ್ದೂರಮ್ಮ ಸವರ್ಣಿಯರ ಒಡೆತನದಲ್ಲಿದ್ದು, ಗಂಗಮ್ಮ ದೇವಸ್ಥಾನ ದಲಿತರ ಒಡೆತನದಲ್ಲಿದೆ,
ಈ ದೇವಸ್ಥಾನಗಳು 40 ವರ್ಷಗಳ ಹಿಂದಿನ ಹಳೆಯ ಕಟ್ಟಡಗಳಾಗಿದ್ದು, ಕಳೆದ ವರ್ಷ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿತ್ತು. 15 ದಿನಗಳ ಹಿಂದೆ ಗ್ರಾಮದಲ್ಲಿ ಸಭೆ ಮಾಡಿದ ದಲಿತರು ಮತ್ತು ಸವರ್ಣಿಯರು, ಗಂಗಮ್ಮ, ಮದ್ದೂರಮ್ಮ ಮತ್ತು ಚನ್ನಕೇಶವ ದೇವರಿಗೆ ದೀಪಾವಳಿ ಹಬ್ಬದಂದು ದೀಪಾರತಿ ಮಾಡುವ ಬಗ್ಗೆ ಮಾತುಕತೆ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ 12 ಗಂಟೆ ಸಮಯದಲ್ಲಿ ದಲಿತ ಮಹಿಳೆಯರು ಆರತಿಗಳನ್ನು ಹೊತ್ತುಕೊಂಡು ಚನ್ನಕೇಶವ, ಮದ್ದೂರಮ್ಮ ಮತ್ತು ಗಂಗಮ್ಮ ದೇವಸ್ಥಾನಗಳ ಬಳಿ ಹೋಗಿದ್ದಾರೆ, ಈ ವೇಳೆ ಸ್ಥಳದಲ್ಲೇ ದಲಿತ ಮಹಿಳೆಯರನ್ನು ತಡೆದ ಸರ್ವಣಿಯರು, ಸವರ್ಣಿಯ ಮಹಿಳೆಯರ ಹಿಂದೆ ಬರುವಂತೆ ಸೂಚನೆ ನೀಡಿದ್ದಾರೆ. ಚನ್ನಕೇಶವ ಮತ್ತು ಮದ್ದೂರಮ್ಮ ದೇವಸ್ಥಾನಗಳ ಬಳಿ ಹೋದಾಗ, ಮೊದಲು ಸವರ್ಣಿಯ ಮಹಿಳೆಯರ ಆರತಿಗಳನ್ನು ಒಳಗೆ ಬಿಡಲಾಗಿದೆ, ದೇವಸ್ಥಾನದ ಒಳಗೆ ಆರತಿಗಳನ್ನ ಬೆಳಗಿ ಪೂಜೆ ಮಾಡಿದ್ದಾರೆ. ದಲಿತ ಮಹಿಳೆಯರು ಸಹ ತಮ್ಮ ಆರತಿಗಳನ್ನು ದೇವರಿಗೆ ಬೆಳಗಲು ಮುಂದಾಗಿದ್ದಾರೆ. ಈ ವೇಳೆ ದೇವಸ್ಥಾನದ ಕಾಂಪೌಂಡ್ ಮುಂದೆಯೇ ತಡೆದ ಸವರ್ಣಿಯರು ಕೌಂಪೌಂಡ್ ನಿಂದ ಹೊರಗೆ ನಿಂತು ಹೊರಗಿನಿಂದಲೇ ಪೂಜೆ ಮಾಡಿಕೊಂಡು ಹೋಗುವಂತೆ ಹೇಳಿದ್ದಾರೆ, ಪ್ರಶ್ನೆ ಮಾಡುತ್ತಲೇ ಒಳ ಹೋಗಲು ಪ್ರಯತ್ನಿಸಿದಾಗ ಕಾಂಪೌಂಡ್ ಗೆ ಬೀಗ ಹಾಕಿದ್ದಾರೆ.
ಮನುಷ್ಯ ಚಂದ್ರನ ಅಂಗಳದಲ್ಲಿ ಇಳಿಯುವ ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಇಂತಹ ಆಚರಣೆಗಳು ನಡೆಯುತ್ತಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ದಲಿತ ಯುವಕ ಅಶೋಕ್ ತಮ್ಮ ನೋವು ಹಂಚಿಕೊಂಡರು.
ದೇವಸ್ಥಾನ ಪ್ರವೇಶ ನಿರಾಕರಣೆ ವಿಚಾರಕ್ಕೆ ಸಂಬಂಧಿದಂತೆ ಸರ್ವಣಿಯ ಮುಖಂಡರ ಜೊತೆ ಮಾತನಾಡಲು ದಲಿತರು ಹೋದಾಗ, ದಲಿತರ ವಿರುದ್ಧವೇ ಆತ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ, ಈ ವೇಳೆ ದಲಿತ ಯುವಕ ಪ್ರಶಾಂತ್ ಎಂಬುವರನ್ನ ತಳ್ಳಲಾಗಿದ್ದು, ಅವರ ಕೈ ಕಾಲುಗಳಿಗೆ ತರಚಿದ ಗಾಯವಾಗಿದೆ, ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆಗೆ ಸಂಬಂಧಿಸಿದಂತೆ ದಲಿತರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.