ತುಮಕೂರು: ಗೃಹ ಸಚಿವ ಜಿ ಪರಮೇಶ್ವರ ಅವರ ವಿಧಾನಸಭಾ ಕ್ಷೇತ್ರದಲ್ಲೇ ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ ಇರುವುದು ಗೊತ್ತಾಗಿದೆ. ತುಮಕೂರಿನ ಕೊರಟಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯದ ಪಿಟ್ನಿಂದ ಹೊರಬಂದಿದ್ದ ಮಲವನ್ನು ಬಾಚಿ ಎತ್ತಿಹಾಕಲು ಹಿಂದುಳಿದ ಸಮುದಾಯದವರ ಬಳಕೆ ಮಾಡಲಾಗಿದೆ. ಬರಿಗೈಯಲ್ಲಿ ಗುದ್ದಲಿ ಹಿಡಿದು ಮಲ ಸ್ವಚ್ಛಗೊಳಿಸುತ್ತಿದ್ದ ಬಾಲಕ ಹಾಗೂ ವ್ಯಕ್ತಿ ಬಳಿ ಆ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ಕೆಲಸ ಸ್ಥಗಿತಗೊಳಿಸುವಂತೆ ಅಧಿಕಾರಿ, ಸಿಬ್ಬಂದಿ ಸನ್ನೆ ಮೂಲಕ ತಿಳಿಸಿದ್ದಾರೆ. ಕೂಡಲೇ ಕೆಲಸ ಬಿಟ್ಟು ಬಾಲಕ ಹಾಗೂ ವ್ಯಕ್ತಿ ತೆರಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡದಂತೆ ಬಾಲಕನಿಗೆ ಸಿಬ್ಬಂದಿ ಸನ್ನೆ ಮಾಡುತ್ತಿದ್ದರು.
ಬಸ್ ನಿಲ್ದಾಣದ ಆವರಣದಲ್ಲಿರುವ ಪ್ರಯಾಣಿಕರ ಶೌಚಾಲಯದ ಪಿಟ್ ತುಂಬಿ ಫ್ಲಾಟ್ ಫಾರಂಗೆ ಹರಿದಿತ್ತು. ಪ್ರಯಾಣಿಕರು ದುರ್ನಾತದಲ್ಲೇ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನಿಲ್ದಾಣದ ಫ್ಲಾಟ್ ಫಾರಂಗೆ ಹರಿಯುತ್ತಿದ್ದ ಮಲ ಸ್ವಚ್ಛಗೊಳಿಸಲು ಬಾಲಕನ ಬಳಸಲಾಗಿದೆ. ಆ ಮೂಲಕ ಮಲ ಹೊರುವ ಪದ್ಧತಿ ನಿಷೇಧ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇದ ಕಾನೂನು ಉಲ್ಲಂಘನೆಯಾಗಿದೆ.