ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ನವೆಂಬರ್ 15 ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 13 ಬೆಳಗ್ಗೆ ವರೆಗೆ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ಮಂಜಿನ ವಾತಾವರಣ ಇರಲಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಸೂಚಿಸಿದೆ.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಂತರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು (ನ.12)ಹಗುರದಿಂದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿಯ ಹವಾಮಾನ ನಿಧಾನವಾಗಿ ಬದಲಾಗುತ್ತಿದೆ. ದೀಪಾವಳಿ ನಂತರದಲ್ಲಿ ಕಡಿಮೆಯಾಗಿದ್ದ ಮಳೆ, ಮತ್ತೆ ಆರಂಭವಾಗುವ ಮುನ್ಸೂಚನೆ ಇದೆ. ಜತೆಗೆ ಕಳೆದ ಎರಡ್ಮೂರು ದಿನದಿಂದ ಬೆಳಗ್ಗಿನ ಹೊತ್ತು ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಮಧ್ಯಾಹ್ನದ ಹೊತ್ತಿನಲ್ಲೆ ಕೆಲವೆಡೆ ವಿಪರೀತ ಎನ್ನುವಷ್ಟು ಬಿಸಿಲಿದೆ. ಇದೀಗ ನವೆಂಬರ್ 15ರ ವರಗೆ ಮಳೆ ಮುನ್ಸೂಚನೆ ಇದೆ. ಒಟ್ಟಾರೆ ದಿನದಿಂದ ದಿನಕ್ಕೆ ಹವಾಮಾನ ಬದಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶೀತ, ಕೆಮ್ಮು, ಜ್ವರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಆರೋಗ್ಯದ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಿ ಎಂದು ವೈದ್ಯರು ಸೂಚಿಸಿದ್ದಾರೆ.