ಬೆಂಗಳೂರು: ನಗ್ನ ಫೋಟೋ ಕಳಿಸುವಂತೆ ಖಾಸಗಿ ಆಸ್ಪತ್ರೆ ವೈದ್ಯೆಗೆ ಕಿರುಕುಳ ಆರೋಪ ಹಿನ್ನೆಲೆ ನಗರದ ಬಸವನಗುಡಿ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜಕುಮಾರ್ ಜೋಡಟ್ಟಿ ವಿರುದ್ಧ ಪೊಲೀಸ್ ಕಮಿಷನರ್ ಬಿ.ದಯಾನಂದ್ಗೆ ವೈದ್ಯೆಯಿಂದ ದೂರು ನೀಡಲಾಗಿದೆ.
2020ರಲ್ಲಿ ಪಿಎಸ್ಐಗೆ ಫೇಸ್ಬುಕ್ ಮೂಲಕ ಯುವತಿ ಪರಿಚಯವಾಗಿದೆ. ಈ ವೇಳೆ ಯುವತಿ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಅದೇ ವರ್ಷ ಪೊಲೀಸ್ ಅಕಾಡೆಮಿಯಲ್ಲಿ ಪಿಎಸ್ಐ ಟ್ರೈನಿಂಗ್ನಲ್ಲಿದ್ದರು. ಈ ವೇಳೆ ಪರಸ್ಪರ ಸ್ನೇಹ ಬೆಳೆದು ಪ್ರೀತಿಯಲ್ಲಿ ಬಿದ್ದಿದ್ದರು.
ನಗ್ನ ಫೋಟೋ ಕಳಿಸುವಂತೆ ಕಿರುಕುಳ
ಇನ್ನು ಇತ್ತೀಚೆಗೆ ನಗ್ನ ಫೋಟೋ ಕಳಿಸುವಂತೆ ಕಿರುಕುಳ ನೀಡಿದ್ದು, ಇದನ್ನ ನಿರಾಕರಿಸಿದ ವೈದ್ಯೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ ನೀಡುತ್ತಿರುವ ಆರೋಪ ಮಾಡಲಾಗಿದೆ. ಹೀಗಾಗಿ ಸದ್ಯ ನೊಂದ ವೈದ್ಯೆಯಿಂದ ಬೆಂಗಳೂರು ಪೊಲೀಸ್ ಕಮಿಷನರ್ಗೆ ದೂರು ನೀಡಲಾಗಿದೆ.
ಸಬ್ ಇನ್ಸ್ಪೆಕ್ಟರ್ ರಾಜಕುಮಾರ್ ಜೋಡಟ್ಟಿ ವೈದ್ಯೆಯಿಂದ ಹಂತ ಹಂತವಾಗಿ 1.71 ಲಕ್ಷ ರೂ. ಹಣ ಪಡೆದಿದ್ದಾರೆ. ವಾಟ್ಸಾಪ್ ಕರೆ ಮಾಡುವ ಮೂಲಕ ನಿನಗೆ ಹಣ ವಾಪಸ್ ಕೊಡುವುದಿಲ್ಲ ಏನು ಮಾಡಿಕೊಳ್ಳುತ್ತೀಯಾ ಮಾಡಿಕೊ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿನಗೆ ಹಣ ಬೇಕಾದರೆ ಠಾಣೆಗೆ ಬಂದು ತೆಗೆದುಕೊಂಡು ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.