ಉತ್ತರ ಪ್ರದೇಶ: ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 10 ನವಜಾತ ಶಿಶುಗಳು ಸಜೀವ ದಹನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿ ಕೆನ್ನಾಲಿಗೆ ಶಿಶು ತೀವ್ರ ನಿಗಾ ಘಟಕ (ಎನ್ಐಸಿಯು)ದ ಸುತ್ತಲೂ ಆವರಿಸಿದೆ. ಬೆಂಕಿ ಹೊತ್ತುಕೊಂಡಂತೆಯೇ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಾಡ ತೊಡಿಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾತಗೊಂಡಿದ್ದು, ವೈದ್ಯರು ಮತ್ತು ಇತರೆ ಸಿಬ್ಬಂದಿ ವಾರ್ಡ್ನ ಕಿಟಕಿ ಗಾಜುಗಳನ್ನು ಒಡೆದು ಅವುಗಳ ಮೂಲಕ ರೋಗಿಗಳನ್ನು ಹೊರಕ್ಕೆ ಕಳುಹಿಸಿದ್ದಾರೆ.
ಆದರೆ, ಅಷ್ಟರಲ್ಲಾಗಲೇ 10 ಶಿಶುಗಳು ಸಜೀವ ದಹನವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತಲುಪುವ ವೇಳೆಗಾಗಲೇ ಎನ್ಐಸಿಯು ವಾರ್ಡ್ ದಟ್ಟ ಹೊಗೆಯಿಂದ ತುಂಬಿಕೊಂಡಿತ್ತು. ದುರ್ಘಟನೆಯಲ್ಲಿ ಸುಮಾರು 10 ನವಜಾತ ಶಿಶುಗಳು ಸುಟ್ಟು ಕರಕಲಾಗಿವೆ. ಈ ನಡುವೆ ವಾರ್ಡ್ನ ಕಿಟಕಿ ಒಡೆದು ಹಲವು ಕಂದಮ್ಮಗಳನ್ನು ರಕ್ಷಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
ಘಟನೆಯಲ್ಲಿ ಹಲವು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ವಾರ್ಡ್ ನಲ್ಲಿ 54 ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದವು ಎಂದು ವರದಿಗಳಿಂದ ತಿಳಿದುಬಂದಿದೆ.
ಮಕ್ಕಳ ವಾರ್ಡ್ನ ಎರಡು ಘಟಕಗಳ ಪೈಕಿ ಒಂದರಲ್ಲಿ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡಿದ್ದು, ಎನ್ಐಸಿಯುದ ಹೊರ ಭಾಗದಲ್ಲಿದ್ದ ಮಕ್ಕಳನ್ನು ರಕ್ಷಿಸಲಾಗಿದೆ. ಒಳ ಭಾಗದಲ್ಲಿದ್ದ ಕೆಲವು ಮಕ್ಕಳ ಜೀವೂ ಉಳಿದಿದೆ ಎಂದು ತಿಳಿದುಬಂದಿದೆ.
ಈ ನಡುವೆ ದುರ್ಘಟನೆ ಸಂಬಂಧ ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದ್ದು, ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.
ಸ್ಥಳಕ್ಕೆ ಆರು ಅಗ್ನಿಶಾಮಕ ವಾಹನಗಳ ಜತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಆಸ್ಪತ್ರೆಯ ಹೊರಗೆ ಮೃತಪಟ್ಟ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಘಟನೆ ಬಗ್ಗೆ ಮಾಹಿತಿ ಪಡೆದು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಝಾನ್ಸಿಗೆ ಕಳುಹಿಸಲಾಗಿದೆ. ಇದರೊಂದಿಗೆ ಝಾನ್ಸಿ ಕಮಿಷನರ್ ಮತ್ತು ಡಿಐಜಿಗೆ ಅಪಘಾತದ ತನಿಖೆಗೆ ಆದೇಶಿಸಲಾಗಿದೆ. ಎಲ್ಲ ಮಕ್ಕಳು ಕೂಡಲೇ ಗುಣಮುಖರಾಗಲಿ ಎಂದು ದೇವರ ಬಳಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ.