ತುಮಕೂರು: 14 ವರ್ಷಗಳ ಹಿಂದೆ ದಲಿತ ಮಹಿಳೆಯೊಬ್ಬರನ್ನು ಹತ್ಯೆಗೈದ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 21 ಮಂದಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2010ರ ಜೂನ್ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆ ಕೊಲೆಯಾಗಿತ್ತು. 14 ವರ್ಷಗಳ ಬಳಿಕ ಇದೀಗ ಒಂದೇ ಗ್ರಾಮದ ಬರೋಬ್ಬರಿ 21 ಮಂದಿಗೆ ತುಮಕೂರು 3ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ತುಮಕೂರಿನ 3ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಆರೋಪಿಗಳು ದೋಷಿ ಎಂದು ಕೋರ್ಟ್ ಆದೇಶಿಸಿತ್ತು. ಇದೀಗ ಕೋರ್ಟ್ 21 ಮಂದಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದು, ಒಟ್ಟು 2,83,200 ರೂ. ದಂಡ ವಿಧಿಸಿದೆ. ಅಂದರೆ ತಲಾ ಒಬ್ಬರಿಗೆ 13,500 ದಂಡ ವಿಧಿಸಿದೆ.
ರಂಗನಾಥ, ಮಂಜುಳಾ, ತಿಮ್ಮರಾಜು, ರಾಜು (ದೇವರಾಜು), ಶ್ರೀನಿವಾಸ್, ಆನಂದ (ಆನಂದಸ್ವಾಮಿ), ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ (ಗಂಗಣ್ಣ), ನಂಜುಂಡಯ್ಯ, ಸತ್ಯಪ್ಪ, ಸತೀಶ, ಚಂದ್ರಶೇಖರ (ಚಂದ್ರಯ್ಯ), ರಂಗಯ್ಯ (ರಾಮಯ್ಯ), ಉಮೇಶ್, ಚನ್ನಮ್ಮ, ಮಂಜಣ್ಣ, ಮಂಜು, ಸ್ವಾಮಿ (ಮೋಹನ್ ಕುಮಾರ್) ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2019ರ ಜೂನ್ 20ರಂದು ಹೊನ್ನಮ್ಮ ಎಂಬ ದಲಿತ ಮಹಿಳೆಯ ಕೊಲೆ ನಡೆದಿತ್ತು. ಹೊನ್ನಮ್ಮ ಡಾಬಾ ನಡೆಸುತ್ತಿದ್ದು, ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಮರದ ತುಂಡು ಸಂಗ್ರಹಿಸಿ ಇಟ್ಟಿದ್ದರು. ಈ ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ಹೊನ್ನಮ್ಮ ದೂರು ನೀಡಿದ್ದರು.
ಇದರಿಂದ ಗ್ರಾಮಸ್ಥರು ಹಾಗೂ ಹೊನ್ನಮ್ಮ ಮಧ್ಯೆ ದ್ವೇಷ ಉಂಟಾಗಿ ಜಗಳ ನಡೆಯುತ್ತಿತ್ತು. ಕೊನೆಗೆ ಹೊನ್ನಮ್ಮ ಅವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಆರೋಪಿಗಳ ವಿರುದ್ಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಜಾತಿನಿಂದನೆ ಕೇಸ್ ದಾಖಲಾಗಿತ್ತು. ಮೃತಪಟ್ಟ ಹೊನ್ಮಮ್ಮ ಎರಡು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಅಲ್ಲದೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಿಜೆಪಿ ಘಟಕದ ಪದಾಧಿಕಾರಿಯಾಗಿದ್ದರು