ವ್ಯಕ್ತಿಯೊಬ್ಬರನ್ನು ವೈದ್ಯರು ಮೃತ ಎಂದು ಘೋಷಿಸಿದ ನಂತರ ವ್ಯಕ್ತಿ ಬದುಕಿ ಬಂದ ಘಟನೆ ನಡೆದಿದೆ. ಅಂತ್ಯಕ್ರಿಯೆ ನಡೆಸಲು ವ್ಯಕ್ತಿಯನ್ನು ಚಿತೆಗೆ ಏರಿಸುತ್ತಿದ್ದಂತೆಯೇ ವ್ಯಕ್ತಿ ಎದ್ದು ಕುಳಿತಿರುವ ಆಶ್ಚರ್ಯಕರ ಘಟನೆ ನಡೆದಿದೆ. ಈ ಘಟನೆ ಸವಾಲಾಗಿ ಪರಿಣಮಿಸಿದ್ದು, ಇಡೀ ಘಟನೆಯ ತನಿಖೆಗೆ ಜಿಲ್ಲಾಧಿಕಾರಿ ತಂಡ ರಚಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಪ್ರಧಾನ ವೈದ್ಯಕೀಯ ಅಧಿಕಾರಿ (PMO) ಸೇರಿದಂತೆ ಮೂವರು ವೈದ್ಯರನ್ನು ಅಮಾನತುಗೊಳಿಸಲಾಗಿದೆ.
ಚಿತಾಗಾರದಲ್ಲಿ ಜೀವಂತವಾದ ವ್ಯಕ್ತಿ :
ಗುರುವಾರ ಮಧ್ಯಾಹ್ನ, 47 ವರ್ಷದ ರೋಹಿತಾಶ್ವ ಎನ್ನುವ ವ್ಯಕ್ತಿಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಿಡಿಕೆ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ರೋಹಿತಾಶ್ವ ಅವರನ್ನು ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದಾದ ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿಯೂ ಇರಿಸಲಾಗಿತ್ತು.
ಅಂತ್ಯಕ್ರಿಯೆಯ ಸಮಯದಲ್ಲಿ ಉಸಿರಾಟ ಆರಂಭ :
ನಂತರ ಸಂಜೆಯ ವೇಳೆಗೆ ರೋಹಿತಾಶ್ವನ ಅಂತ್ಯಸಂಸ್ಕಾರ ಮಾಡುವಾಗ, ಇದ್ದಕ್ಕಿದ್ದಂತೆ ರೋಹಿತಾಶ್ವ ಉಸಿರಾಡಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡು ಸ್ಥಳದಲ್ಲಿ ಗೊಂದಲ ಉಂಟಾಗಿದ್ದು, ಕೂಡಲೇ ಅವರನ್ನು ಮರಳಿ ಬಿಡಿಕೆ ಆಸ್ಪತ್ರೆಗೆ ಕರೆತರಲಾಯಿತು. ಅವರನ್ನು ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ಈ ಘಟನೆಯ ನಂತರ ಬಿಡಿಕೆ ಆಸ್ಪತ್ರೆಯಲ್ಲಿ ಕೋಲಾಹಲ ಉಂಟಾಗಿದ್ದು, ವೈದ್ಯರ ವಿರುದ್ಧ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಆಸ್ಪತ್ರೆ ಆಡಳಿತ ಮೌನ ವಹಿಸಿದ್ದು, ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಜಿಲ್ಲಾಧಿಕಾರಿ ರಾಮಾವತಾರ್ ಮೀನಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಕುರಿತು ತನಿಖಾ ತಂಡ ರಚಿಸಿ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ನಿರ್ಲಕ್ಷ್ಯ ತೋರಿರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.