ಬಚಾವ್ ಆದ್ರಾ ಜಮೀರ್?: ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು

ಬೆಂಗಳೂರು: ನಿರ್ಣಾಯಕ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಕ್ಷದ ಶಿಸ್ತುಕ್ರಮದಿಂದ ಸಚಿವ ಜಮೀರ್ ಅಹ್ಮದ್ ಬಚಾವ್ ಆದರೇ? ಎಂಬ ಮಾತುಗಳು ಕೇಳಿಬರುತ್ತಿವೆ.

ಹೌದು.. ಕರ್ನಾಟಕ ಉಪ ಚುನಾವಣೆಯ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ಪ್ರಮುಖವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಜಯಭೇರಿ ಭಾರಿಸಿದ್ದಾರೆ.

ಆದರೆ ಮತದಾನಕ್ಕೂ ಮುನ್ನ ನಡೆದ ಕೆಲ ಘಟನೆಗಳು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ತರುವ ಶಂಕೆ ಮೂಡಿಸಿದ್ದವು.

ಪ್ರಮುಖವಾಗಿ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗಳು ಮತ್ತು ಅವರ ಕಾರ್ಯಗಳು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಮತದಾರರು ತೀರ್ಪು ನೀಡುವ ಶಂಕೆ ಇತ್ತು. ಇದಕ್ಕೆ ಇಂಬು ನೀಡುವಂತೆ ಮತದಾನ ಮುಗಿದ ಎರಡು ದಿನದ ನಂತರ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಆತ್ಮವಿಶ್ವಾಸವನ್ನು ಕಳೆದುಕೊಂಡಂತೆ ಹೇಳಿಕೆಯನ್ನು ನೀಡಿದ್ದರು.

ತಮ್ಮ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು, ಕುಮಾರಸ್ವಾಮಿಯ ಬಗ್ಗೆ ಸಕಾರಾತ್ಮಕ ಮಾತನ್ನಾಡಿದ್ದರು. ಇದರ ಜೊತೆಗೆ, ಬಹಿರಂಗ ಪ್ರಚಾರದ ಕೊನೆಯ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಆಡಿದ್ದ ಮಾತು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಕರಿಯ ಎಂದು ಕುಮಾರಸ್ವಾಮಿ ವಿರುದ್ದ ಜಮೀರ್, ಜನಾಂಗೀಯ ನಿಂದನೆಯ ಮಾತನ್ನಾಡಿದ್ದರು.

ಇದರ ಜೊತೆಗೆ, ದೇವೇಗೌಡರ ಕುಟುಂಬವನ್ನೇ ಖರೀದಿಸುವ ಶಕ್ತಿ ನಮಗಿದೆ (ಮುಸ್ಲಿಮರು) ಎಂದು ಹೇಳಿದ್ದು ಕೂಡಾ ಆಕ್ರೋಶಕ್ಕೆ ಕಾರಣವಾಗಿತ್ತು. ಜಮೀರ್ ಅಹ್ಮದ್ ಅವರ ಹೇಳಿಕೆ, ಸ್ವಲ್ಪಮಟ್ಟಿನ ಡ್ಯಾಮೇಜಿಗೆ ಕಾರಣವಾಗಿದೆ ಎಂದು ಯೋಗೇಶ್ವರ್ ಪ್ರತಿಕ್ರಿಯಿಸಿದ್ದರು. ಇನ್ನು, ಜಮೀರ್ ಅವರ ಹೇಳಿಕೆಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಾ ವಿರೋಧಿಸಿದ್ದರು. ಜಮೀರ್ ಹೇಳಿಕೆಯಿಂದಾಗಿ ಜೆಡಿಎಸ್ ಪಾರ್ಟಿಗೆ ಪ್ಲಸ್ ಆಗಿದೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಕೂಡಾ ಹೇಳಿದ್ದರು.

ಇದರ ಜೊತೆಗೆ ರಾಜ್ಯದಲ್ಲಿ ವಕ್ಫ್ ವಿವಾದ ಕೂಡ ಜಮೀರ್ ಮುಳುವಾಗಿತ್ತು. ವಕ್ಫ್ ಆಸ್ತಿ ಹೆಸರಲ್ಲಿ ರೈತರಿಗೆ ಜಮೀನು ಮಾಲೀಕರಿಗೆ ನೋಟಿಸ್ ನೀಡಿದ್ದು, ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಇದರಿಂದಾದ ಡ್ಯಾಮೇಜ್ ಕಂಟ್ರೋಲ್ ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸರಣಿ ಹೇಳಿಕೆಗಳನ್ನು ನೀಡಿ ತೇಪೆ ಹಚ್ಚುವ ಕೆಲಸ ಮಾಡಿದರಾದರೂ ಪ್ರತಿಭಟನೆ ಮಾತ್ರ ನಿಂತಿರಲಿಲ್ಲ. ಇದು ಸಚಿವ ಜಮೀರ್ ವಿರುದ್ಧ ಕ್ರಮಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿತ್ತು.

ಇಷ್ಟೆಲ್ಲಾ ವಿಚಾರಗಳ ನಡುವೆಯೇ ಚನ್ನಪಟ್ಟಣದಲ್ಲಿ ಭರ್ಜರಿ ಅಂದರೆ ಶೇ. 85ರಷ್ಟು ಮತದಾನವಾಗಿತ್ತು. ಚನ್ನಪಟ್ಟಣದಲ್ಲಿ ದೇವೇಗೌಡ, ಯಡಿಯೂರಪ್ಪ ಆದಿಯಾಗಿ ಮೈತ್ರಿ ನಾಯಕರು ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಪ್ರಚಾರವನ್ನು ನಡೆಸಿದ್ದರು. ಅಲ್ಲದೆ ಭಾರಿ ಪ್ರಮಾಣದ ಮತದಾನವಾಗಿರುವುದು ಜೆಡಿಎಸ್ ಪಕ್ಷಕ್ಕೆ ಲಾಭವಾಗಲಿದೆ ಎಂಬ ಭಾವನೆ ಕೂಡ ವ್ಯಕ್ತವಾಗಿತ್ತು.

ಜಮೀರ್ ವಜಾಕ್ಕೆ ಒತ್ತಡ ಇತ್ತು!

ಸಿದ್ದರಾಮಯ್ಯನವರ ಆಪ್ತವಲಯದಲ್ಲಿರುವ ಜಮೀರ್ ಅವರನ್ನು ವಜಾಗೊಳಿಸುವಂತೆ ಅಥವಾ ರಾಜೀನಾಮೆ ಪಡೆಯುವಂತೆ ಸಿಎಂ ಮೇಲೆ ಒತ್ತಡ ಹೆಚ್ಚುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆಗೂ ಜಮೀರ್ ಗೆ ಉತ್ತಮ ಬಾಂಧವ್ಯವಿಲ್ಲ ಎನ್ನುವುದು ಗೊತ್ತಿರುವ ವಿಚಾರ.

ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಎಂದು ಜಮೀರ್ ಅಹ್ಮದ್ ಸಾಕಷ್ಟು ಬಾರಿ ಹೇಳಿದ್ದು ಕೂಡಾ, ಕಾಂಗ್ರೆಸ್ಸಿನ ಒಂದು ವಲಯದ ಕೋಪಕ್ಕೆ ಕಾರಣವಾಗಿತ್ತು. ಹಲವು ಎಚ್ಚರಿಕೆಯ ನಂತರವೂ ಜಮೀರ್ ತಮ್ಮ ಮಾತನ್ನು ಮುಂದುವರಿಸಿದ್ದರು. ಕೊನೆಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆದು ವಾರ್ನಿಂಗ್ ಕೊಟ್ಟಿದ್ದರು.

ಈ ಎಲ್ಲಾ ಕಾರಣದಿಂದಾಗಿ, ಚನ್ನಪಟ್ಟಣದ ಸೋಲು-ಗೆಲುವಿನ ವಿಚಾರ ಸಚಿವ ಜಮೀರ್ ಅಹ್ಮದ್ ಖಾನ್ ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿತ್ತು. ಆದರೆ ಇದೀಗ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವಿನ ಮೂಲಕ ಜಮೀರ್ ಮತ್ತೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ ಎಂದು ರಾಜಕೀಯವಲಯದಲ್ಲಿ ಕೇಳಿಬರುತ್ತಿದೆ.

Related Posts

ಹಾಸನಕ್ಕೆ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಎಚ್ ಕಾರು ಅಪಘಾತ: ಅಪಾಯದಿಂದ ಪಾರು

ಹಾಸನ : ಹಾಸನದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಹಾಸನದ ಮಾರ್ಗದಲ್ಲಿ ಸಚಿವ ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಬೇರೆ ವ್ಯವಸ್ಥೆ ಮೂಲಕ…

ಸಿದ್ದು ಸಂಪುಟಕ್ಕೆ ಹೊಸದಾಗಿ ಸೇರಬಹುದಾದ ಶಾಸಕರ ಪಟ್ಟಿ ಇಲ್ಲಿದೆ!

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಗಿಯುತ್ತಲೇ ಸಂಪುಟಕ್ಕೆ ಸರ್ಜರಿ ಮಾಡುವ ವಿಚಾರ ಮುನ್ನಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಲು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ಅಲ್ಲಿಯೇ ಹೈಕಮಾಂಡ್ ಬಳಿ…

Leave a Reply

Your email address will not be published. Required fields are marked *