ಇಂಡಿಯನ್ ಪ್ರೀಮಿಯರ್ ಲೀಗ್ನ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ಅದು ಸಹ ಪಂದ್ಯ ಗೆಲ್ಲಲು ಅಂಪೈರ್ಗಳನ್ನ ಫಿಕ್ಸ್ ಮಾಡುತ್ತಿದ್ದರು ಎಂಬ ಗಂಭೀರ ಆರೋಪ. ಈ ಆರೋಪ ಮಾಡಿದ್ದು ಮತ್ಯಾರೂ ಅಲ್ಲ, ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ.
ಈ ಬಗ್ಗೆ ಪೋಡ್ಕಾಸ್ಟ್ವೊಂದಲ್ಲಿ ಮಾತನಾಡಿದ ಲಲಿತ್ ಮೋದಿ, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಅವರು ಸಿಎಸ್ಕೆ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್ಗಳನ್ನು ನೇಮಿಸುತ್ತಿದ್ದರು. ಮೊದಲು ನಾನು ಈ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಸಿಎಸ್ಕೆ ಪಂದ್ಯಗಳಿಗೆಲ್ಲಾ ಚೈನ್ನೈನ ಅಂಪೈರ್ಗಳೇ ಇರುತ್ತಿದ್ದರು. ಇದನ್ನು ಅಂಪೈರ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ.
ಸಿಎಸ್ಕೆ ಪರ ತೀರ್ಪು ಬರಲೆಂದು ತಮಗೆ ಬೇಕಾದ ಅಂಪೈರ್ಗಳನ್ನು ನೇಮಿಸುತ್ತಿದ್ದರು. ಈ ಮೂಲಕ ಫಿಕ್ಸಿಂಗ್ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಷಯವನ್ನು ಬಹಿರಂಗಪಡಿಸಲು ನಾನು ಪ್ರಯತ್ನಿಸಿದೆ. ಈ ವೇಳೆ ಅವರು ನನ್ನ ವಿರುದ್ಧ ನಿಂತರು. ಅಂದು ಎನ್ ಶ್ರೀನಿವಾಸನ್ ಅವರು ಬಿಸಿಸಿಐ ಕಾರ್ಯದರ್ಶಿಯಾಗಿದ್ದರು.
ನಾನು ಸಿಎಸ್ಕೆ ಫ್ರಾಂಚೈಸಿಯ ಕಳ್ಳಾಟವನ್ನು ಬೆಳಕಿಗೆ ತಂದಿದ್ದರಿಂದ ಅವರು ನನ್ನ ಕಡು ವಿರೋಧಿಯಾದರು. ಹೀಗಾಗಿ ನನ್ನ ವಿರುದ್ಧ ಭ್ರಷ್ಟಚಾರದ ಅರೋಪಳನ್ನು ಹೊರಿಸಿದರು. ಈಗಲೂ ಖಚಿತವಾಗಿ ಹೇಳಬಲ್ಲೆ ಚೆನ್ನೈ ಸೂಪರ್ ಕಿಂಗ್ಸ್ ಅಂಪೈರ್ಗಳನ್ನೇ ಫಿಕ್ಸ್ ಮಾಡಿಕೊಳ್ಳುತ್ತಿದ್ದದ್ದು ನಿಜ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನ ಮಾಜಿ ಅಧ್ಯಕ್ಷರ ಆರೋಪವು ಭಾರೀ ಚರ್ಚೆಗೆ ಕಾರಣವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಚಾಂಪಿಯನ್ ಪಟ್ಟದ ಮೇಲೆಯೇ ಪ್ರಶ್ನೆಗಳೆದ್ದಿವೆ. ಏಕೆಂದರೆ ಸಿಎಸ್ಕೆ ಫ್ರಾಂಚೈಸಿ ಈ ಹಿಂದೆ 2 ವರ್ಷಗಳ ಕಾಲ ನಿಷೇಧಕ್ಕೊಳಗಾಗಿತ್ತು.
ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಗಳ ಕಾರಣದಿಂದಾಗಿ 2016 ಮತ್ತು 2017 ರ ಐಪಿಎಲ್ನಿಂದ ಸಿಎಸ್ಕೆ ಫ್ರಾಂಚೈಸಿಯನ್ನು ಬ್ಯಾನ್ ಮಾಡಲಾಗಿತ್ತು. ಇದೀಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೇಲೆ ಅಂಪೈರ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದ್ದು, ಈ ಗಂಭೀರ ಆರೋಪದ ಬಗ್ಗೆ ಸಿಎಸ್ಕೆ ಏನು ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.