ನವದೆಹಲಿ: ಜಿಎಸ್ಟಿ ದರ ಪರಿಷ್ಕರಣೆ ನಿರ್ಧರಿಸಲು ರಚಿಸಲಾಗಿರುವ ಸಚಿವರ ಮಂಡಳಿಯು (ಜಿಒಎಂ) ತಂಬಾಕು ಇತ್ಯಾದಿ ದುಷ್ಕರ್ಮ ಸರಕುಗಳಿಗೆ ಸಿನ್ ಟ್ಯಾಕ್ಸ್ ಅನ್ನು ಶೇ. 28ರಿಂದ ಶೇ. 35ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದರೊಂದಿಗೆ ದುಷ್ಕರ್ಮ ಸರಕುಗಳೆಂದು ಪರಿಗಣಿಸಲಾದ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳು, ಪೆಪ್ಸಿ, ಕೊಕಾ ಕೋಲಾ, ಥಂಬ್ಸಪ್ ಇತ್ಯಾದಿ ಕಾರ್ಬೊನೇಟೆಡ್ ಪಾನೀಯಗಳ ಬೆಲೆ ಏರಿಕೆ ಆಗಬಹುದು.
ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವರ ಮಂಡಳಿಯು ಇನ್ನೂ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರುವುದು ತಿಳಿದುಬಂದಿದೆ. ಸಿದ್ಧ ಉಡುಪುಗಳ ಮೇಲಿನ ತೆರಿಗೆಯನ್ನು ಬೆಲೆ ಶ್ರೇಣಿಗೆ ಅನುಸಾರವಾಗಿ ಪರಿಷ್ಕರಿಸಿದೆ. 1,500 ರೂವರೆಗಿನ ಬೆಲೆಯ ರೆಡಿಮೇಡ್ ಗಾರ್ಮೆಂಟ್ಸ್ಗಳಿಗೆ ಜಿಎಸ್ಟಿ ಶೇ. 5ರಷ್ಟಿರಬೇಕು ಎಂದು ಜಿಒಎಂ ಸಲಹೆ ನೀಡಿದೆ.
ಹಾಗೆಯೇ, 1,500 ರೂನಿಂದ 10,000 ರೂವರೆಗಿನ ಸಿದ್ಧ ಉಡುಪುಗಳು ಶೇ. 18ರ ಜಿಎಸ್ಟಿ ಶ್ರೇಣಿಗೆ ಬರಲಿದೆ. ಹತ್ತು ಸಾವಿರ ರೂಗಿಂತ ಹೆಚ್ಚು ಬೆಲೆಯ ಸಿದ್ಧ ಉಡುಪುಗಳಿಗೆ ಶೇ. 28ರಷ್ಟು ತೆರಿಗೆ ವಿಧಿಸಬೇಕು ಎಂಬುದು ಜಿಒಎಂ ಸಲಹೆ.
ಗ್ರೂಪ್ ಆಫ್ ಮಿನಿಸ್ಟರ್ಸ್ ಒಟ್ಟಾರೆ 148 ವಸ್ತುಗಳಿಗೆ ತೆರಿಗೆ ಬದಲಾವಣೆ ಮಾಡುವಂತೆ ಜಿಎಸ್ಟಿ ಕೌನ್ಸಿಲ್ಗೆ ಶಿಫಾರಸು ಮಾಡಿದೆ. ಇವುಗಳನ್ನು ಜಾರಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ಹಣ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಸದ್ಯದ ಜಿಎಸ್ಟಿ ವ್ಯವಸ್ಥೆಯಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ಗಳಿವೆ. ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ಜಿಎಸ್ಟಿ ದರಗಳಿವೆ. ಇದರಲ್ಲಿ ಬಹಳ ಅಗತ್ಯವಾಗಿರುವ ಸರಕುಗಳಿಗೆ ಕನಿಷ್ಠ, ಅಂದರೆ ಶೇ. 5ರ ತೆರಿಗೆ ಇರುತ್ತದೆ. ತೀರಾ ಅಗತ್ಯ ಅಲ್ಲದ ಮತ್ತು ಐಷಾರಾಮಿ ಎನಿಸುವ ವಸ್ತುಗಳಿಗೆ ಗರಿಷ್ಠ ಶೇ. 28ರಷ್ಟು ಜಿಎಸ್ಟಿ ಇದೆ. ಉದಾಹರಣೆಗೆ, ಕಾರು, ವಾಷಿಂಗ್ ಮೆಷೀನ್, ಫೈವ್ ಸ್ಟಾರ್ ಹೋಟೆಲ್ ಸರ್ವಿಸ್ ಇತ್ಯಾದಿ. ಎಲ್ಲಾ ಸರಕುಗಳನ್ನು ಅವುಗಳ ಅಗತ್ಯತೆಗೆ ಅನುಸಾರವಾಗಿ ಜಿಎಸ್ಟಿ ದರವನ್ನು ಅನ್ವಯಿಸಲಾಗುತ್ತಿದೆ.
ಆದರೆ, ದುಷ್ಕರ್ಮದ ಸರಕುಗಳಿಗೆ ಸರ್ಕಾರ ಯಥೇಚ್ಛವಾಗಿ ತೆರಿಗೆ ವಿಧಿಸಬಲ್ಲುದು. ಆರೋಗ್ಯಕ್ಕೆ ಮಾರಕವಾದ ಸಿಗರೇಟ್, ಮದ್ಯ ಸೇವನೆಯನ್ನು ದುಷ್ಕರ್ಮ ಅಥವಾ ದುಶ್ಚಟ ಎಂದು ಪರಿಗಣಿಸಲಾಗುತ್ತದೆ. ಕೋಲಾದಂತಹ ಪಾನೀಯಗಳೂ ಕೂಡ ಆರೋಗ್ಯಕ್ಕೆ ಮಾರಕವೆನಿಸಿದ್ದು ಅವೂ ಕೂಡ ಸಿನ್ ಗೂಡ್ಸ್ ಎನಿಸುತ್ತವೆ. ಹೀಗಾಗಿ, ಇವುಗಳಿಗೆ ಸರ್ಕಾರ ಹೆಚ್ಚುವರಿಯಾಗಿ ಸಿನ್ ಟ್ಯಾಕ್ಸ್ ವಿಧಿಸುತ್ತದೆ.
ಸದ್ಯ ಜಿಎಸ್ಟಿ ದರಗಳನ್ನು ಪರಿಷ್ಕರಣೆಗೆ ಜಿಒಎಂ ಶಿಫಾರಸುಗಳನ್ನು ಮಾಡಿದೆ. ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ದರಗಳನ್ನು ಅವಲೋಕಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜಿಎಸ್ಟಿ ಕೌನ್ಸಿಲ್ನಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರವನ್ನೇ ಹಣಕಾಸು ಸಚಿವಾಲಯವೂ ಪರಿಗಣಿಸುವ ಸಾಧ್ಯತೆ ಇದೆ.